ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸೌಹಾರ್ದ ಸಂಕೇತ: ಯು.ಟಿ.ಖಾದರ್

ಮಂಗಳೂರು, ಮಾ.3: ಅಬ್ಬಕ್ಕನ ಸಾಹಸ ಚರಿತ್ರೆ ನಮ್ಮೆಲ್ಲರಿಗೂ ಸ್ಫೂರ್ತಿ, ಅದೇ ರೀತಿ ಉತ್ಸವ ಸೌಹಾರ್ದತೆಯ ಸಂಕೇತವಾಗಿ ಯುವ ಜನತೆಗೆ ಪ್ರೇರಣೆಯಾಗಲಿ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಶುಭ ಹಾರೈಸಿದರು.
ದ.ಕ. ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಉಳ್ಳಾಲದ ಬೀಚ್‌ನಲ್ಲಿಂದು ಹಮ್ಮಿಕೊಂಡ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಉತ್ಸವವನ್ನು ಉದ್ಘಾಟಿಸಿ ಅವರು ಇಂದು ಮಾತನಾಡುತ್ತಿದ್ದರು.
ಅಬ್ಬಕ್ಕ ಈ ನಾಡಿಗಾಗಿ ಎಲ್ಲರನ್ನು ಜೊತೆಗೂಡಿಸಿಕೊಂಡು ಶತ್ರುಗಳ ವಿರುದ್ದ ಹೋರಾಡಿದ ನಾಯಕತ್ವ ಆಕೆಯ ದೈರ್ಯ ನಮ್ಮೆಲ್ಲರಿಗೂ ಪ್ರೇರಕ ಶಕ್ತಿ. ಈ ಚರಿತ್ರೆ ಮುಂದಿನ ಹಾಗೂ ಈಗಿನ ಪೀಳಿಗೆಯವರಿಗೆ ತಿಳಿಯಬೇಕು ಎನ್ನುವ ಉದ್ದೇಶದಿಂದ ಉಳ್ಳಾಲದ ಆಸುಪಾಸಿನ ಊರುಗಳಲ್ಲಿ ಅಬ್ಬಕ್ಕ ಉತ್ಸವವನ್ನು ಆಚರಿಸಿಕೊಂಡು ಈ ಬಾರಿ ಉಳ್ಳಾಲದಲ್ಲಿ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕಾಕತಾಳೀಯವಾಗಿ ಉಳ್ಳಾಲ ತಾಲೂಕು ಘೋಷಣೆಯಾಗಿ ವಿವಿಧ ರೀತಿಯ ಅಭಿವೃದ್ಧಿಗೆ ನಾಂದಿಯಾಗಿದೆ. ಉಳ್ಳಾಲದ ತೊಕ್ಕೊಟ್ಟಿನಲ್ಲಿ 8 ಕೋಟಿ ರೂ. ವೆಚ್ಚದ ಅಬ್ಬಕ್ಕ ಭವನ ನಿರ್ಮಾಣವಾಲಿದೆ ಎಂದು ಖಾದರ್ ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ, ಮಂಗಳೂರು ಮೂಡಾ ಆಯುಕ್ತ ಶ್ರೀಕಾಂತ ರಾವ್, ಉಳ್ಳಾಲ ಜಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಶೀದ್, ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷ ಭರತ್ ಕುಮಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಸ್ವಾಗತಿಸಿದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಅಬ್ಬಕ್ಕ ಉತ್ಸವದ ಅಂಗವಾಗಿ ಉಳ್ಳಾಲದ ಭಾರತ್ ಪ್ರೌಢಶಾಲಾ ವಠಾರದಿಂದ ಉಳ್ಳಾಲ ಬೀಚ್ ವರೆಗೆ ಅಬ್ಬಕ್ಕ ಉತ್ಸವ ಹಾಗೂ ಚೆನ್ನ ಮರಕಾಲ ದಿಬ್ಬಣಕ್ಕೆ ಚಾಲನೆ ನೀಡಲಾಯಿತು. ವಿದುಷಿ ವಿದ್ಯಾ ರಾಧಾಕೃಷ್ಣ ಮತ್ತು ಬಳಗದಿಂದ ಸ್ವಾಗತ ನೃತ್ಯ, ಮಂಜೇಶ್ವರದ ಬಾಲಕೃಷ್ಣ ಬಳಗದವರಿಂದ ನೃತ್ಯ ಕಾರ್ಯಕ್ರಮ, ಉಳ್ಳಾಲದ ಸ್ಥಳೀಯ ಪ್ರತಿಭೆಗಳಿಂದ ವೀರರಾಣಿ ಅಬ್ಬಕ್ಕ ದ್ರಶ್ಯಶ್ರಾವ್ಯ ರೂಪಕ ಕಾರ್ಯಕ್ರಮ, ರಾಗ ಸಂಗಮ ಶಿವಮೊಗ್ಗ ತಂಡದಿಂದ ಸಂಗೀತ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.







