ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರಕ್ಕೆ ಸರಕಾರದ ಆದೇಶ

ಹೊಸದಿಲ್ಲಿ,ಮಾ.2: ಪುಲ್ವಾಮಾ ದಾಳಿ ಮತ್ತು ನಂತರದ ಬೆಳವಣಿಗೆಗಳ ಬಳಿಕ ಬೇಹುಮಾಹಿತಿಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈಗಿರುವ ಭದ್ರತಾ ಕ್ರಮಗಳನ್ನು ಹೆಚ್ಚಿಸುವಂತೆ ಮತ್ತು ಇನ್ನಷ್ಟು ಕಟ್ಟೆಚ್ಚರ ವಹಿಸುವಂತೆ ಸರಕಾರವು ಶನಿವಾರ ದೇಶದ ಎಲ್ಲ ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಆದೇಶವನ್ನು ಹೊರಡಿಸಿದೆ.
ನಾಗರಿಕ ವಾಯುಯಾನ ಸುರಕ್ಷತಾ ಘಟಕವು(ಬಿಸಿಎಎಸ್)ವು ಎಲ್ಲ ರಾಜ್ಯಗಳ ಹಿರಿಯ ಪೊಲೀಸ್ ಅಧಿಕಾರಿಗಳು,ಎಲ್ಲ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳ ಭದ್ರತಾ ಮುಖ್ಯಸ್ಥರು ಹಾಗೂ ಸಿಐಎಸ್‌ಎಫ್ ಅಧಿಕಾರಿಗಳಿಗೆ ಈ ಆದೇಶವನ್ನು ರವಾನಿಸಿದೆ. 20 ನಿರ್ದಿಷ್ಟ ಸುರಕ್ಷಾ ಕ್ರಮಗಳನ್ನು ಹೆಚ್ಚಿಸುವಂತೆ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಸೂಚಿಸಿರುವ ಬಿಸಿಎಎಸ್,ಮುಂದಿನ ಆದೇಶದವರೆಗೆ ಈ ಕ್ರಮಗಳು ಕಾರ್ಯಾಚರಣೆಯಲ್ಲಿರುತ್ತವೆ ಎಂದು ತಿಳಿಸಿದೆ.
ಟರ್ಮಿನಲ್ ಕಟ್ಟಡ, ಹಾರಾಟ ಪ್ರದೇಶ,ಎಲ್ಲ ಕಾರ್ಯಾಚರಣೆ ಪ್ರದೇಶಗಳು ಇತ್ಯಾದಿ ಕಡೆಗಳಲ್ಲಿ ಪ್ರವೇಶದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ, ಪ್ರಯಾಣಿಕರ ಹೆಚ್ಚಿನ ತಪಾಸಣೆ, ಟರ್ಮಿನಲ್ ಕಟ್ಟಡದ ಮುಖ್ಯ ಪ್ರವೇಶದ್ವಾರದಲ್ಲಿ ಸಿಬ್ಬಂದಿ ಮತ್ತು ಇತರರ ಹೆಚ್ಚಿನ ಯಾದ್ರಚ್ಛಿಕ ತಪಾಸಣೆ ಇತ್ಯಾದಿ ಕ್ರಮಗಳನ್ನು ತನ್ನ ಕಟ್ಟೆಚ್ಚರ ಅಧಿಸೂಚನೆಯಲ್ಲಿ ತಿಳಿಸಿರುವ ಬಿಸಿಎಎಸ್,ಟರ್ಮಿನಲ್ ಕಟ್ಟಡದ ಎದುರು ಯಾವುದೇ ವಾಹನದ ಪಾರ್ಕಿಂಗ್ ಮಾಡುವಂತಿಲ್ಲ ಮತ್ತು ಕಾರ್ ಪಾರ್ಕಿಂಗ್ ಪ್ರದೇಶವನ್ನು ಪ್ರವೇಶಿಸುವ ಎಲ್ಲ ವಾಹನಗಳ ತೀವ್ರ ತಪಾಸಣೆ ನಡೆಸಬೇಕು ಎಂದು ತಾಕೀತು ಮಾಡಿದೆ.
ಟರ್ಮಿನಲ್ ಕಟ್ಟಡದ ಬಳಿ ತಪಾಸಣೆ ನಡೆಸುವಾಗ ಬಾಂಬ್ ಪತ್ತೆ ಮತ್ತು ವಿಲೇವಾರಿ ದಳಗಳು ಹಾಗೂ ಶ್ವಾನದಳಗಳನ್ನು ಬಳಸುವಂತೆ ಸೂಚಿಸಲಾಗಿದೆ.
ಮುಂದಿನ ಆದೇಶದವರೆಗೆ ವಿಸಿಟರ್ ಎಂಟ್ರಿ ಪಾಸ್‌ಗಳನ್ನು ವಿತರಿಸದಂತೆ ತಿಳಿಸಿರುವ ಅಧಿಸೂಚನೆಯು,ಏರ್ ಆ್ಯಂಬುಲೆನ್ಸ್ ಸೇರಿದಂತೆ ನಿಗದಿತವಲ್ಲದ ಹಾರಾಟ ಕಾರ್ಯಚರಣೆಗಳ ಮೇಲೆ ಕಟ್ಟುನಿಟ್ಟಿನ ನಿಗಾಯಿರಿಸುವಂತೆ ಆದೇಶಿಸಿದೆ.







