ಕಾಶ್ಮೀರದ ಜಮಾಅತೆ ಇಸ್ಲಾಮಿ ನಿಷೇಧ ಕೇಂದ್ರದ ಪ್ರತೀಕಾರ ಕ್ರಮ: ಮೆಹಬೂಬ ಮುಫ್ತಿ

ಶ್ರೀನಗರ,ಮಾ.2: ಕಾಶ್ಮೀರದ ಜಮಾಅತೆ ಇಸ್ಲಾಮಿ (ಜೆಇಎಲ್) ಸಂಘಟನೆಯನ್ನು ನಿಷೇಧಿಸಿರುವುದು ಕೇಂದ್ರ ಸರಕಾರದಿಂದ ಪ್ರತೀಕಾರದ ಕ್ರಮವಾಗಿದೆ ಮತ್ತು ಇದು ಅಪಾಯಕಾರಿ ಪರಿಣಾಮಗಳನ್ನುಂಟು ಮಾಡಲಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಶನಿವಾರ ಇಲ್ಲಿ ಹೇಳಿದರು.
ರಾಜ್ಯದಲ್ಲಿ,ವಿಶೇಷವಾಗಿ ಕಣಿವೆಯಲ್ಲಿ ಜೆಇಎಲ್ ಯುವ ಕಾರ್ಯಕರ್ತರು ಮತ್ತು ನಾಯಕರ ಬಂಧನದ ಬಳಿಕ ಸೇಡಿನ ವಾತಾವರಣವಿದೆ. ಜೆಇಎಲ್ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಯಾಗಿದೆ. ಅದೊಂದು ಸಿದ್ಧಾಂತವಾಗಿದೆ ಮತ್ತು ಸಂಘಟನೆಯ ಕೆಲವು ಕಾರ್ಯಕರ್ತರನ್ನು ಬಂಧಿಸುವುದರಿಂದ ಸಿದ್ಧಾಂತವನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ. ನಾವಿದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ ಎಂದು ತನ್ನ ಪಕ್ಷದ ಕೇಂದ್ರಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಫ್ತಿ ಹೇಳಿದರು.
ದೇಶದಲ್ಲಿ ಗುಂಪುಗಳಿಂದ ಥಳಿಸಿ ಹತ್ಯೆ ಪ್ರಕರಣಗಳಿಗೆ ಹೊಣೆಯಾಗಿರುವ ಆರೆಸ್ಸೆಸ್,ಶಿವಸೇನೆ ಇತ್ಯಾದಿಗಳ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ,ಆದರೆ ಕಾಶ್ಮೀರದಲ್ಲಿ ಬಡವರಿಗೆ ನೆರವಾಗುವುದರಲ್ಲಿ ತೊಡಗಿಕೊಂಡಿರುವ ಸಾಮಾಜಿಕ ಸಂಘಟನೆಯನ್ನು ನಿಷೇಧಿಸಲಾಗಿದೆ. ನಾವಿದಕ್ಕೆ ಅವಕಾಶ ನೀಡುವುದಿಲ್ಲ,ನಿಷೇಧದ ಪರಿಣಾಮಗಳು ಅಪಾಯಕಾರಿಯಾಗಲಿವೆ ಎಂದರು.
ಜಮ್ಮು-ಕಾಶ್ಮೀರವನ್ನು ಜೈಲನ್ನಾಗಿ ಪರಿವರ್ತಿಸದಂತೆ ಕೇಂದ್ರಕ್ಕೆ ಸೂಚಿಸಿದ ಅವರು,ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರಕಾರವಿದ್ದಾಗ ಬಿಜೆಪಿಯು ಈಗೇನು ಮಾಡುತ್ತಿದೆಯೋ ಅದನ್ನು ಮಾಡಲು ನಾವು ಅವಕಾಶ ನೀಡಿರಲಿಲ್ಲ. ಆದರೆ ದುರದೃಷ್ಟವಶಾತ್ ಅವರನ್ನು ತಡೆಯಲು ಈಗ ಯಾರೂ ಇಲ್ಲ. ಕಾಶ್ಮೀರಿಯೋರ್ವ ಥಳಿಸಲ್ಪಟ್ಟಾಗ ಜನ ಮೆಚ್ಚುತ್ತಾರೆ ಮತ್ತು ಖುಷಿ ಪಡುತ್ತಾರೆ ಎಂದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಫ್ತಿ,ಜೆಇಎಲ್ ನಡೆಸುತ್ತಿದ್ದ ಶಾಲೆಗಳು ಸೇರಿದಂತೆ ಅದರ ನಾಯಕರ ಆಸ್ತಿಗಳನ್ನು ಮೊಹರ್ ಬಂದ್ ಮಾಡುತ್ತಿರುವುದು ದುರದೃಷ್ಟಕರವಾಗಿದೆ ಮತ್ತು ಇದು ನಡೆಯಬಾರದಿತ್ತು ಎಂದರು.
ಸೌಮ್ಯವಾದಿ ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷ ಮಿರ್ವೈಝ್ ಉಮರ್ ಫಾರೂಕ್ ಅವರ ನಿವಾಸದ ಮೇಲೆ ಇತ್ತೀಚಿನ ಎನ್‌ಐಎ ದಾಳಿಯನ್ನು ಖಂಡಿಸಿದ ಅವರು,ಕೇಂದ್ರವು ಪ್ರತಿಯೋರ್ವ ಕಾಶ್ಮೀರಿ ತನ್ನ ಚಿಂತನೆಗೆ ಬೆಲೆ ತೆರುವಂತೆ ಮಾಡುತ್ತಿದೆ ಎಂದರು. ಜಮಾಅತೆ ಇಸ್ಲಾಮಿ ನಿಷೇಧವನ್ನು ವಿರೋಧಿಸಿ ಪಿಡಿಪಿ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯನ್ನು ಹೊರಡಿಸಿದ್ದರಾದರೂ ಭಾರೀ ಸಂಖ್ಯೆಯಲ್ಲಿದ್ದ ಪೊಲೀಸರು ಅದನ್ನು ಅರ್ಧದಲ್ಲಿಯೇ ತಡೆದರು.







