ಮಣಿಪಾಲ: ಸತತ 36 ಗಂಟೆಗಳ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’ಗೆ ಚಾಲನೆ

ಮಣಿಪಾಲ, ಮಾ. 2:ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನಿರ್ವಹಿ ಸುವ ಸತತ 36 ಗಂಟೆಗಳ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’ ಕಾರ್ಯಕ್ರಮಕ್ಕೆ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಶನಿವಾರ ಬೆಳಗ್ಗೆ ಚಾಲನೆ ನೀಡಿದರು.
ದೇಶಾದ್ಯಂತ ಒಟ್ಟು 48 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶನಿವಾರ ಬೆಳಗ್ಗೆ 7:30ರಿಂದ ರವಿವಾರ ರಾತ್ರಿ 8:30ರವರೆಗೆ ನಿರಂತರವಾಗಿ ಈ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದಲ್ಲಿ ಮಣಿಪಾಲದ ಎಂಐಟಿ ಅಲ್ಲದೇ ಸುರತ್ಕಲ್‌ನ ಎನ್‌ಐಟಿಕೆ, ಬೆಂಗಳೂರು ಹಾಗೂ ಹುಬ್ಬಳ್ಳಿಯ ಒಂದೊಂದು ಕಾಲೇಜುಗಳಲ್ಲೂ ಹ್ಯಾಕಥಾನ್ ನಡೆಯುತ್ತಿದೆ.
ಮಣಿಪಾಲದಲ್ಲಿ, ನಾಲ್ಕು ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ನೀಡಿದ ಸಮಸ್ಯೆಗಳಿಗೆ ದೇಶಾದ್ಯಂತದಿಂದ ಬಂದ ಆಯ್ದ ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳ ತಂಡ ಪರಿಹಾರವನ್ನು 36 ಗಂಟೆಗಳಲ್ಲಿ ಕಂಡು ಹಿಡಿಯಲು ಪ್ರಯತ್ನಿಸುತ್ತಿವೆ. ಮಣಿಪಾಲದಲ್ಲಿ ತಲಾ ಆರು ಮಂದಿ ವಿದ್ಯಾರ್ಥಿಗಳು ಹಾಗೂ ಇಬ್ಬರು ಮಾರ್ಗದರ್ಶಕರಿರುವ ಒಟ್ಟು 23 ತಂಡಗಳಿದ್ದು, ಇವುಗಳಲ್ಲಿ ಸುಮಾರು 138ಕ್ಕೂ ಅಧಿಕ ಮಂದಿ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯೋನ್ಮುಖ ರಾಗಿದ್ದಾರೆ. ಇವರಲ್ಲಿ 96 ಮಂದಿ ವಿದ್ಯಾರ್ಥಿಗಳು ಹಾಗೂ 42 ಮಂದಿ ವಿದ್ಯಾರ್ಥಿನಿಯರು ಸೇರಿದ್ದು, 16ಮಂದಿ ಮಾರ್ಗದರ್ಶಕರು ಆಗಮಿಸಿದ್ದಾರೆ.
ಮಣಿಪಾಲದಲ್ಲಿ ಹತ್ತು ರಾಜ್ಯ ತಂಡಗಳು ಪಾಲ್ಗೊಂಡಿವೆ. ಜಮ್ಮು ಐಐಟಿಯಿಂದ ಎರಡು ತಂಡಗಳು ಬಂದಿದ್ದು, ಉಳಿದಂತೆ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಹಿಮಾಚಲಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರ್ಯಾಣ, ಹೊಸದಿಲ್ಲಿ ಹಾಗೂ ತೆಲಂಗಾಣಗಳಿಂದ ತಂಡಗಳು ಆಗಮಿಸಿವೆ ಎಂದು ಎಂಐಟಿಯ ನಿರ್ದೇಶಕರಾದ ಡಾ.ಶ್ರೀಕಾಂತ ರಾವ್ ತಿಳಿಸಿದ್ದಾರೆ.
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನ ಮೂರನೇ ಆವೃತ್ತಿ ಇದಾಗಿದ್ದು, ದೇಶದಲ್ಲಿ 48 ಕಾಲೇಜುಗಳಲ್ಲಿ ಒಟ್ಟು 8,500ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಂದ್ರ ಸರಕಾರದ ವಿವಿಧ ಇಲಾಖೆಗಳ 17 ಹಾಗೂ 318 ಖಾಸಗಿ ಕಂಪೆನಿಗಳು ಮುಂದಿಟ್ಟಿರುವ ಡಿಜಿಟಲ್ ಇಂಡಿಯಾದ ಒಟ್ಟು 335 ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಶ್ರಮಿಸುತಿದ್ದಾರೆ.
ಮಣಿಪಾಲದಲ್ಲಿರುವ 23 ತಂಡಗಳು ಒಟ್ಟು ನಾಲ್ಕು ಕಂಪೆನಿಗಳು -ಬೆಂಗಳೂರಿನ ಬಿಇಎಂಎಲ್, ಮಹಿಂದ್ರಾ ಇಲೆಕ್ಟ್ರಿಕ್, ವಿಎಂ ವೇರ್ ಹಾಗೂ ಬೆಳಗಾವಿಯ ಫೌಂಡ್ರಿ ಕ್ಲಸ್ಟರ್ಸ್- ಮುಂದೊಡ್ಡಿರುವ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನದಲ್ಲಿದೆ.
ಮಣಿಪಾಲದಲ್ಲಿರುವ 23 ತಂಡಗಳು ಒಟ್ಟು ನಾಲ್ಕು ಕಂಪೆನಿಗಳು -ಬೆಂಗಳೂರಿನ ಬಿಇಎಂಎಲ್, ಮಹಿಂದ್ರಾ ಇಲೆಕ್ಟ್ರಿಕ್, ವಿಎಂ ವೇರ್ ಹಾಗೂ ಬೆಳಗಾವಿಯ ಫೌಂಡ್ರಿ ಕ್ಲಸ್ಟರ್ಸ್- ಮುಂದೊಡ್ಡಿರುವ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನದಲ್ಲಿದೆ. ಮಣಿಪಾಲ ಎಂಐಟಿಯ ಒಟ್ಟು ನಾಲ್ಕು ತಂಡಗಳು ಹ್ಯಾಕಥಾನ್‌ಗೆ ಆಯ್ಕೆಯಾಗಿದ್ದು, ಇವುಗಳು ಜೈಪುರ, ನಾಗಪುರ, ಹುಬ್ಬಳ್ಳಿ ಹಾಗೂ ಎನ್‌ಐಟಿ ವಾರಂಗಲ್‌ಗಳಲ್ಲಿ ಇದೇ ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ ಎಂದು ಡಾ.ಶ್ರೀಕಾಂತ್ ರಾವ್ ಪತ್ರಕರ್ತರಿಗೆ ತಿಳಿಸಿದರು.
ರವಿವಾರ ರಾತ್ರಿ ಕಾರ್ಯಕ್ರಮ ಮುಗಿದ ಬಳಿಕ ಇಲ್ಲಿನ ವಿದ್ಯಾರ್ಥಿಗಳು ಕಂಡು ಹಿಡಿದ ಉತ್ತರದ ವೌಲ್ಯಮಾಪನ ನಡೆಯಲಿದ್ದು, ಇವುಗಳಲ್ಲಿ ಮೊದಲ ಮೂರು ಉತ್ತಮ ಸಾಧನೆಗೆ ಆಯಾ ಕಂಪೆನಿಗಳು ಆಕರ್ಷಕ ನಗದು ಬಹುಮಾನ ನೀಡಲಿವೆ.
ಇಂದು ಬೆಳಗ್ಗೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಚಾಲನೆ ನೀಡಿದರು. ಮಣಿಪಾಲ ವಿವಿ ಕುಲಸಚಿವ ಡಾ.ನಾರಾಯಣ ಸಭಾಹಿತ್, ಡಾ.ಶ್ರೀಕಾಂತ್ ರಾವ್ ಹಾಗೂ ಎಂಐಟಿಯ ಜಂಟಿ ನಿರ್ದೇಶಕ ಡಾ.ಬಿಎಚ್‌ವಿ ಪೈ ಉಸ್ಥಿತರಿದ್ದರು.
36 ಗಂಟೆಗಳ ಸಾಫ್ಟ್‌ವೇರ್ ಸರಣಿಯ ಫೈನಲ್‌ಗೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೊಸದಿಲ್ಲಿಯಲ್ಲಿ ಹಸಿರು ನಿಶಾನೆ ತೋರಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಇವುಗಳಿಗೆ ಹ್ಯಾಕಥಾನ್ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. 2017ರಲ್ಲಿ ಮೊದಲ ವರ್ಷದಲ್ಲಿ 30000 ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿದ್ಯಾರ್ಥಿಗಳು 19 ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹುಡುಕಿದ್ದಾರೆ. ಈ ವರ್ಷ ಎರಡು ಲಕ್ಷಕ್ಕೂ ಅಧಿಕ ಮಂದಿ ಮೊದಲ ಸುತ್ತಿನಲ್ಲಿ ಭಾಗವಹಿಸಿದ್ದು, ಇದೀಗ ಅಂತಿಮ ಸುತ್ತಿನಲ್ಲಿ 8,500 ಮಂದಿ ಭಾಗವಹಿಸಿದ್ದಾರೆ ಎಂದರು.
ಎಐಸಿಟಿಇಯ ಅಧ್ಯಕ್ಷ ಪ್ರೊ.ಅನಿಲ್ ಸಹಸ್ರಬುದ್ಧೆ, ಸಂಘಟನಾ ಸಮಿತಿಯ ಸಹ ಅಧ್ಯಕ್ಷ ಡಾ.ಆನಂದ್ ದೇಶಪಾಂಡೆ ಈ ಸಂದರ್ಭದಲ್ಲಿ ಉಸ್ಥಿತರಿದ್ದರು. ಪ್ರಧಾನಿ ಅವರು ಸಹ ಈ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಮೂಲಕ ಸಂವಾದ ನಡೆಸುವ ಕಾರ್ಯಕ್ರಮವಿದೆ ಎಂದು ಡಾ.ಶ್ರೀಕಾಂತ್ ರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಬಿ.ಎಚ್.ವಿ.ಪೈ, ಸಹ ನಿರ್ದೇಶಕ ಡಾ.ಸೋಮಶೇಖರ್ ಭಟ್, ಡಾ.ಶ್ಯಾಮ ಕಾರಂತ್, ಪ್ರೊ.ವಿನೋದ್ ಕಾಮತ್ ಉಪಸ್ಥಿತರಿದ್ದರು.









