ಬಾಂಬ್ ಬೆದರಿಕೆ: ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್-2 ಪಾರ್ಶ್ವಿಕ ತೆರವು

ಮುಂಬೈ, ಮಾ. 1: ಮುಂಬೈ ವಿಮಾನ ನಿಲ್ದಾಣ ಶನಿವಾರ ಬೆಳಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಬಾಂಬ್ ಬೆದರಿಕೆ ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನ ಕೆಲವು ಭಾಗಗಳನ್ನು ತೆರವುಗೊಳಿಸಲಾಯಿತು.
ಕೂಡಲೇ ಭದ್ರತಾ ಪಡೆಗಳು ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು ಎಂದು ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ 12 ಗಂಟೆಯಲ್ಲಿ ಅಂತಾರಾಷ್ಟ್ರೀಯ ಟರ್ಮಿನಲ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಮುಂಬೈ ವಿಮಾನ ನಿಲ್ದಾಣ ಪ್ರಾಧಿಕಾರ ಬೆಳಗ್ಗೆ ಸುಮಾರು 11 ಗಂಟೆಗೆ ಬೆದರಿಕೆ ಕರೆ ಸ್ವೀಕರಿಸಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ವಿಮಾನ ಸಂಸ್ಥೆಗಳ ಕಚೇರಿಗಳು, ನಿರ್ಗಮನ ಪೂರ್ವ ಹಾಗೂ ಆಗಮನ ಪ್ರದೇಶಗಳಲ್ಲಿ ತೆರವುಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆದರಿಕೆ ಕರೆ ಅಂದಾಜಿಸಲು ಬಾಂಬ್ ಬೆದರಿಕೆ ಕರೆ ಅಂದಾಜು ಸಮಿತಿ (ಬಿಟಿಎಸಿ) ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಕ್ಷಣಾ ಕ್ರಮವಾಗಿ ಸಮಿತಿ 2ನೇ ಟರ್ಮಿನಲ್‌ನ ನಿರ್ಗಮನ, ಪೂರ್ವ ಭದ್ರತೆ ನಡೆಸುವ ಪ್ರದೇಶ, ಭೇಟಿಯಾಗುವವರ ಹಾಗೂ ಅಭಿನಂದಿಸುವವರ ಪ್ರದೇಶದಿಂದ ತೆರವುಗೊಳಿಸಲು ನಿರ್ಧರಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಕೇಂದ್ರ ಸರಕಾರ ದೇಶದ ಎಲ್ಲ ವಿಮಾನ ಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳಿಗೆ ಮುನ್ನೆಚ್ಚರಿಕೆ ನೀಡಿದೆ. ಪುಲ್ವಾಮ ದಾಳಿ ಹಾಗೂ ಅನಂತರದ ಬೆಳವಣಿಗೆ ಬಳಿಕ ಸ್ವೀಕರಿಸಲಾದ ಬೇಹುಗಾರಿಕೆ ಮಾಹಿತಿ ಹಿನ್ನೆಲೆಯಲ್ಲಿ ಈಗಿರುವ ಭದ್ರತಾ ಕ್ರಮಗಳನ್ನು ಬಿಗಿಗೊಳಿಸುವಂತೆ ಕೇಂದ್ರ ಸರಕಾರ ಸೂಚಿಸಿದೆ.







