ಪತ್ರಕರ್ತರಲ್ಲಿ ಸೇವಾ ಮನೋಭಾವನೆ ಕಡಿಮೆಯಾಗುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ
ಸುತ್ತೂರಿನಲ್ಲಿ 34ನೇ ರಾಜ್ಯ ಪತ್ರಕರ್ತರ ಸಮ್ಮೇಳನ

ಮೈಸೂರು,ಮಾ.2: ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಪತ್ರಿಕೆಗಳು ಸಮಾಜದ ಮುಖವಾಣಿಯಾಗಿ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಪತ್ರಕರ್ತರಲ್ಲಿ ಅಂತಹ ಸೇವಾಮನೋಭಾವನೆ ಕಡಿಮೆಯಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಸುತ್ತೂರಿನಲ್ಲಿ ನಡೆಯುತ್ತಿರುವ 34ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶನಿವಾರ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪತ್ರಿಕೆಗಳು ಸಮಾಜಕ್ಕೆ ಮುಖವಾಣಿಯಾಗಿ, ಸರ್ಕಾರದ ತಪ್ಪುಗಳನ್ನು ತಿದ್ದುವ ಮತ್ತು ಎಚ್ಚರಿಸುವ ಕೆಲಸವನ್ನು ಮಾಡಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಪಡೆಯುವ ಗುರಿಯನ್ನು ಹೊಂದಿದ್ದವು. ನಂತರ ಸೇವಾ ಮನೋಭಾವವನ್ನು ಹೊಂದಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂತಹ ಭಾವನೆಗಳು ಕಡಿಮೆಯಾಗುತ್ತಿವೆ. ಸಮಾಜದಲ್ಲಿ ನಡೆಯುವ ವಾಸ್ತವತೆಯನ್ನು ಜನರಿಗೆ ತಲುಪಿಸುವ ಮೂಲಕ ನಂಬಿಕೆ ವಿಶ್ವಾಸ ಉಳಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪತ್ರಿಕೆಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದರು.
ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಅಪಾರ ನಂಬಿಕೆ ಇಟ್ಟವನು ನಾನು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ಪತ್ರಿಕೆಗಳು ಜನರ ಧ್ವನಿಯಾಗಬೇಕು, ನೀವು ಕೊಡುವ ಸುದ್ದಿಗಳು ಸಮಾಜದ ಹಿತ ಕಾಯುವಂತೆ ಇರಬೇಕು. ಇಲ್ಲದಿದ್ದರೆ ಸ್ವಾಭಾವಿಕವಾಗಿ ಜನರ ವಿಶ್ವಾಸ ಕಡಿಮೆಯಾಗುತ್ತದೆ. ಕೆಲವು ವರ್ಷಗಳಿಂದ ಪತ್ರಿಕೆಗಳು ಉದ್ಯಮ ಆಗಿರಲಿಲ್ಲ. ಉದ್ಯಮವೇ ಬೇರೆ ಸೇವೆಯೇ ಬೇರೆ. ಯಾವಾಗ ಪತ್ರಿಕೆಯನ್ನು ಉದ್ಯಮ ಮತ್ತು ವ್ಯಾಪಾರೀಕರಣಗೊಳಿಸಲಾಗುತ್ತದೊ ಆಗ ಸೇವೆಗೆ ಧಕ್ಕೆ ಉಂಟಾಗುತ್ತದೆ. ಪತ್ರಿಕೆ ಯಾವುದೇ ಕಾರಣಕ್ಕೂ ಉದ್ಯಮ ಆಗಬಾರದು ಎಂದು ಹೇಳಿದರು.
ಸುದ್ದಿಗಳು ಯಾವಗಲೂ ವಾಸ್ತವತೆ ಮತ್ತು ತನಿಖಾ ವರದಿಗಳಿಂದ ಇಲ್ಲದಿದ್ದರೆ ಅದು ಸುದ್ದಿಯಾಗಿರಲು ಸಾಧ್ಯವಿಲ್ಲ. ಅದಕ್ಕೆ ಮೌಲ್ಯವೂ ಇರುವುದಿಲ್ಲ. ಹಾಗಾಗಿ ನೀವು ಮಾಡುವ ಸುದ್ಧಿಗಳು ವಾಸ್ತವತೆಯಿಂದ ಕೂಡಿರಬೇಕು. ಅನಗತ್ಯವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ವೃತ್ತಿ ಧರ್ಮವನ್ನು ಕಾಪಾಡಿಕೊಂಡು ಹೋಗುವುದು ನಿಮ್ಮೆಲ್ಲರ ಕರ್ತವ್ಯ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯ. ಆ ಕಾರಣಕ್ಕಾಗಿ ಪ್ರಜಾಪ್ರಭುತ್ವ ರಂಗದಲ್ಲಿ ಪತ್ರಿಕಾರಂಗವನ್ನು ನಾಲ್ಕನೇ ಸ್ತಂಭ ಎಂದು ಕರೆಯಲಾಗುತ್ತಿದೆ. ಪತ್ರಿಕೆಗಳು ಸಮಾಜದ ಮುಖವಾಣಿಗಳು, ಅವುಗಳ ಜವಾಬ್ದಾರಿ ಇಂದು ಸಮಾಜದ ಮುಖವಾಣಿಯಾಗದೆ, ಸಮಾಜದ ಬದಲಾವಣೆಯಲ್ಲಿ, ಜ್ಞಾನ ಹೆಚ್ಚಿಸುವಲ್ಲಿ, ಭಾಷೆ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ ಎಂದರು.
ಸಮಾಜದ ಮುಖವಾಣಿಯಾದ ಪತ್ರಕರ್ತರು ಇತ್ತೀಚಿನ ದಿನಗಳಲ್ಲಿ ಮೌಢ್ಯ ಕಂದಾಚಾರಗಳಿಗೆ ಒತ್ತುಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಗೆ ಕ್ಷುಲ್ಲಕ ವಿಚಾರಕ್ಕೂ ಒತ್ತು ಕೊಡುತ್ತಾರೆ. ಗಂಡ ಹೆಂಡತಿ ಜಗಳ ಆಡಿದರೆ ಅದನ್ನೇ ದಿನ ಪೂರ್ತಿ ತೊರಿಸಿ ಸಮಾಜದ ಸ್ವಾಸ್ತ್ಯವನ್ನು ಹದಗೆಡಿಸುತ್ತಾರೆ. ಸಮಾಜಕ್ಕೆ ಒಳಿತಾಗುವಂತಹ ಸುದ್ದಿಗಳನ್ನು ನೀಡಬೇಕೆ ಹೊರತು ಸಮಾಜಕ್ಕೆ ಕೆಟ್ಟದಾಗುವಂತಹ ಸುದ್ದಿಗಳನ್ನು ನೀಡಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಕೃತಜ್ಞತಾ ನುಡಿಗಳನ್ನಾಡಿದರು. ಶಾಸಕ ಎಲ್.ನಾಗೇಂದ್ರ, ರಾಷ್ಟ್ರೀಯ ಪತ್ರಕರ್ತ ಸಂಘದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಲೋಕೇಶ್, ಬಾಲಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







