ವಿಮಾನ ನಿಲ್ದಾಣಗಳಲ್ಲಿ ಮೂತ್ರ ಶೇಖರಿಸಿಡಲು ಹೇಳಿದ್ದೇನೆ: ಕೇಂದ್ರ ಸಚಿವ ಗಡ್ಕರಿ

ನಾಗ್ಪುರ್, ಮಾ. 4: ತಮ್ಮ 'ಔಟ್ ಆಫ್ ಬಾಕ್ಸ್' ಐಡಿಯಾಗಳಿಗೆ ಬೆಂಬಲ ದೊರಕುತ್ತಿಲ್ಲ ಎಂಬ ವಿಷಾದದ ನಡುವೆಯೇ ಕೇಂದ್ರ ಸಚಿವ ನಿತಿನ್ ಗಡ್ಕರಿ ರವಿವಾರ ತಮ್ಮ ಇನ್ನೊಂದು ಐಡಿಯಾದ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಮನುಷ್ಯರ ಮೂತ್ರದಿಂದ ಯೂರಿಯಾ ಉತ್ಪಾದನೆ- ಯೂರಿಯಾ ಫ್ರಮ್ ಯೂರಿನ್.
ನಾಗ್ಪುರ ಮುನಿಸಿಪಲ್ ಕಾರ್ಪೊರೇಶನ್ ಆಯೋಜಿಸಿದ್ದ ಮೇಯರ್ ಇನ್ನೊವೇಶನ್ ಅವಾರ್ಡ್ ವಿತರಣಾ ಸಮಾರಂಭದಲ್ಲಿ ಯುವ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು ''ಮನುಷ್ಯರ ಮೂತ್ರ ಕೂಡ ಜೈವಿಕ ಇಂಧನ ತಯಾರಿಸಲು ಸಹಕಾರಿ ಅದು ಅಮೋನಿಯಂ ಸಲ್ಫೇಟ್ ಹಾಗೂ ನೈಟ್ರೋಜನ್ ಒದಗಿಸುತ್ತದೆ'' ಎಂದರು.
''ವಿಮಾನ ನಿಲ್ದಾಣಗಳಲ್ಲಿ ಮೂತ್ರ ಶೇಖರಿಸಿಡಲು ಹೇಳಿದ್ದೇನೆ. ನಾವು ಯೂರಿಯಾ ಆಮದು ಮಾಡುತ್ತೇವೆ. ಆದರೆ ನಾವು ದೇಶದಲ್ಲಿ ಮೂತ್ರ ಶೇಖರಿಸಿದರೆ ನಂತರ ಯೂರಿಯಾ ಆಮದುಗೊಳಿಸುವ ಅಗತ್ಯವಿರದು. ಅದಕ್ಕೆ ಅಂತಹ ಸಾಮರ್ಥ್ಯವಿದೆ'' ಎಂದು ಹೇಳಿದರು.
''ನನ್ನ ಐಡಿಯಾಗಳು ಅದ್ಭುತವಾಗಿರುವುದರಿಂದ ಇತರ ಜನರು ಸಹಕರಿಸುತ್ತಿಲ್ಲ. ಮುನಿಸಿಪಲ್ ಕಾರ್ಪೊರೇಶನ್ ಕೂಡ ಸಹಾಯ ಮಾಡದು ಎಂದು ಅವರು ತಿಳಿಸಿದರು.
ತಮ್ಮ ಮೂತ್ರವನ್ನು ಶೇಖರಿಸಿ ಅದನ್ನು ದಿಲ್ಲಿಯ ತಮ್ಮ ಅಧಿಕೃತ ಬಂಗಲೆಯ ಉದ್ಯಾನವನದಲ್ಲಿ ಗೊಬ್ಬರವಾಗಿ ಬಳಸಿದ್ದನ್ನು ಅವರು ಕೆಲ ವರ್ಷಗಳ ಹಿಂದೆ ಹೇಳಿಕೊಂಡಿದ್ದರಲ್ಲದೆ ತಮ್ಮ ತೋಟದಲ್ಲಿನ ಇಳುವರಿ ಇದರಿಂದ ಶೇ 25ರಷ್ಟು ಹೆಚ್ಚಾಗಿತ್ತು ಎಂದಿದ್ದರು.







