ಪುಲ್ವಾಮ ಹುತಾತ್ಮರ ಕುಟುಂಬಗಳಿಗೆ 110 ಕೋಟಿ ರೂ. ದೇಣಿಗೆ ನೀಡಲು ಮುಂದಾದ ಮುರ್ತಝ ಹಮೀದ್
ಹುಟ್ಟಿನಿಂದಲೇ ಅಂಧ ಈ ಸಂಶೋಧಕ

ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆ ಮುರ್ತಾಝ ಹಮೀದ್
ಕೋಟಾ, ಮಾ.4: ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ 110 ಕೋಟಿ ರೂ. ದೇಣಿಗೆ ನೀಡಲು ಕೋಟಾ ಮೂಲದ ಹಾಗೂ ಮುಂಬೈ ನಿವಾಸಿಯಾಗಿರುವ 44 ವರ್ಷದ ಮುರ್ತಝ ಎ ಹಮೀದ್ ಎಂಬವರು ಮುಂದೆ ಬಂದಿದ್ದಾರೆ.
ಪ್ರಧಾನಿ ಕಾರ್ಯಾಲಯಕ್ಕೆ ಈ ಬಗ್ಗೆ ಇಮೇಲ್ ಕಳುಹಿಸಿರುವ ಹಮೀದ್, ಪ್ರಧಾನಿ ಮೋದಿಯನ್ನು ಭೇಟಿಯಾಗಲು ಸಮಯಾವಕಾಶ ಕೋರಿದ್ದಾರೆ. ಹುಟ್ಟಿನಿಂದಲೇ ಅಂಧರಾಗಿರುವ ಹಮೀದ್ ಅವರು ಸರಕಾರಿ ವಾಣಿಜ್ಯ ಕಾಲೇಜು, ಕೋಟಾ ಇಲ್ಲಿಂದ ಪದವಿ ಪಡೆದಿದ್ದಾರೆ. ಅವರು ಮುಂಬೈಯಲ್ಲಿ ಸಂಶೋಧಕ ಹಾಗೂ ವಿಜ್ಞಾನಿಯಾಗಿದ್ದಾರೆ.
ತಮ್ಮ ಕುರಿತಾದ ವಿವರಗಳನ್ನು ಸಲ್ಲಿಸುವಂತೆ ರಾಷ್ಟ್ರೀಯ ಪರಿಹಾರ ನಿಧಿಯ ಉಪ ಕಾರ್ಯದರ್ಶಿ ಅಗ್ನಿ ಕುಮಾರ್ ದಾಸ್ ಹೇಳಿದ್ದಾರೆಂದು ಹಮೀದ್ ತಿಳಿಸುತ್ತಾರೆ. ತಮ್ಮ ತಾಯ್ನಾಡಿಗೆ ತಮ್ಮ ಪ್ರಾಣವನ್ನೇ ಬಲಿದಾನಗೈದವರನ್ನು ಬೆಂಬಲಿಸುವ ಗುಣ ಪ್ರತಿಯೊಬ್ಬ ಭಾರತೀಯನಲ್ಲಿ ರಕ್ತಗತವಾಗಬೇಕು ಎಂದು ಅವರು ಹೇಳುತ್ತಾರೆ.
ತಮ್ಮ ವೈಜ್ಞಾನಿಕ ಆವಿಷ್ಕಾರಗಳನ್ನು ಸರಕಾರ ಸರಿಯಾದ ಸಮಯದಲ್ಲಿ ಪರಿಗಣಿಸಿದ್ದರೆ ಪುಲ್ವಾಮದಂತಹ ದಾಳಿಗಳನ್ನು ತಡೆಗಟ್ಟಬಹುದಾಗಿತ್ತು ಎಂದು ಅವರು ಹೇಳುತ್ತಾರೆ. ತಾವು `ಫೂಯೆಲ್ ಬರ್ನ್ ರೇಡಿಯೇಶನ್ ಟೆಕ್ನಾಲಜಿ'' ಅಭಿವೃದ್ಧಿ ಪಡಿಸಿದ್ದಾಗಿ, ಯಾವುದೇ ಜಿಪಿಎಸ್, ಕ್ಯಾಮರಾ ಅಥವಾ ತಾಂತ್ರಿಕ ಉಪಕರಣವಿಲ್ಲದೆ ಯಾವದೇ ವಾಹನ ಯಾ ವಸ್ತುವನ್ನು ಪತ್ತೆ ಹಚ್ಚಲು ಈ ತಂತ್ರಜ್ಞಾನ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ತಾವು ಅಭಿವೃದ್ಧಿ ಪಡಿಸಿದ ಈ ತಂತ್ರಜ್ಞಾನವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸರಕಾರಕ್ಕೆ ಉಚಿತವಾಗಿ ಕೊಡುವ ಪ್ರಸ್ತಾಪವನ್ನು ಸೆಪ್ಟೆಂಬರ್ 2016ರಲ್ಲಿಯೇ ಮುಂದಿಟ್ಟಿದ್ದರೂ ಎರಡು ವರ್ಷಗಳ ನಂತರ, ಅಕ್ಟೋಬರ್ 2018ರಲ್ಲಿ ಅದಕ್ಕೆ ಆರಂಭಿಕ ಅನುಮೋದನೆ ದೊರಕಿತ್ತು ಎನ್ನುವ ಹಮೀದ್ ಈ ಬಗ್ಗೆ ಮುಂದಿನ ಬೆಳವಣಿಗೆಗನ್ನು ನಿರೀಕ್ಷಿಸಲಾಗಿದೆ ಎಂದಿದ್ದಾರೆ.
ವಾಣಿಜ್ಯ ವಿಷಯದಲ್ಲಿ ಪದವೀಧರರಾಗಿರುವ ಹೊರತಾಗಿಯೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಗೆ ಆವಿಷ್ಕಾರ ನಡೆಸಲು ಸಾಧ್ಯವಾಯಿತು ಎಂಬ ಪ್ರಶ್ನೆಗೆ, 2010ರಲ್ಲಿ ಜೈಪುರ ಪೆಟ್ರೋಲ್ ಬಂಕಿನಲ್ಲಿ ನಡೆದ ಬೆಂಕಿ ಅವಘಡದಿಂದಾಗಿ ಮೊಬೈಲ್ ಫೋನಿನಲ್ಲಿ ಮಾತನಾಡುವಾಗ ಇಂಧನ ಹೇಗೆ ಬೆಂಕಿ ಹತ್ತಿಕೊಳ್ಳುತ್ತದೆ ಎಂದು ತಿಳಿಯುವ ಕುತೂಹಲ ತನಗೆ ಮೂಡಿತ್ತು. ಹೆಚ್ಚಿನ ಅಧ್ಯಯನದಿಂದ ಮುಂದೆ `ಫ್ಯೂಯೆಲ್ ಬರ್ನ್ ರೇಡಿಯೇಶನ್ ಟೆಕ್ನಾಲಜಿ' ಅಭಿವೃದ್ಧಿ ಪಡಿಸಿದ್ದಾಗಿ ಅವರು ತಿಳಿಸಿದ್ದಾರೆ.







