ಉಡುಪಿ: ದೈಹಿಕ ಹಿಂಸೆ, ಬಲವಂತದ ಗರ್ಭಪಾತ ಆರೋಪ; ನ್ಯಾಯಾಧೀಶರ ವಿರುದ್ಧ ಪತ್ನಿಯಿಂದ ದೂರು

ಉಡುಪಿ, ಮಾ.4: ಕೆಲ ತಿಂಗಳ ಹಿಂದೆ ಮಂಗಳೂರು ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಉಡುಪಿ ನ್ಯಾಯಾಲಯದ ನಾಲ್ಕನೆ ಜೆಎಂಎಫ್‌ಸಿ ನ್ಯಾಯಾಧೀಶರಾಗಿದ್ದ ಅಶೋಕ್ ತಿಮ್ಮಯ್ಯ ವಿರುದ್ಧ ದೈಹಿಕ ಹಿಂಸೆ, ಬಲವಂತದ ಗರ್ಭಪಾತ ನಡೆಸಿರುವ ಬಗ್ಗೆ ಅವರ ಪತ್ನಿ ವರಲಕ್ಷ್ಮೀ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆನ್ನರಾಯಪಟ್ಟಣ ತಾಲೂಕಿನ ಗರಕಹಳ್ಳಿಯ ಅಶೋಕ್ ಅವರನ್ನು ವರಲಕ್ಷ್ಮೀ 2012ರಲ್ಲಿ ಕುಣಿಗಲ್ ತಾಲೂಕಿನಲ್ಲಿ ಮದುವೆಯಾಗಿದ್ದರು. ನಂತರ ಇವರು ಬೆಂಗಳೂರಿನ ಬನಶಂಕರಿಯಲ್ಲಿರುವ ಅಶೋಕ್‌ರ ಅಣ್ಣನ ಹೆಂಡತಿ ಮನೆಯಲ್ಲಿ ವಾಸವಾಗಿದ್ದರು. ಅಲ್ಲಿ ಅಶೋಕ್, ತಮ್ಮಯ್ಯ, ಸಿದ್ದಪ್ಪ, ಶ್ವೇತ, ರೂಪಾ, ರತ್ನಮ್ಮ ಎಂಬವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರು. ಇದೇ ವೇಳೆ ವರಲಕ್ಷ್ಮೀ ಅವರಿಗೆ ಅಶೋಕ್ ಸೀಮೆಎಣ್ಣೆ ಸುರಿದು ಸಾಯಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಂದುರೆಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಉಡುಪಿಯ ಬ್ರಹ್ಮಗಿರಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ವರಲಕ್ಷ್ಮೀ ಹಣ ತರಲಿಲ್ಲವೆಂದು ಪತಿ ಕೋಲಿನಿಂದ ಹಲ್ಲೆ ಮಾಡಿದ್ದಲ್ಲದೇ, ಮಗುವಿಗೂ ಸಹ ಹಲ್ಲೆ ಮಾಡಿರುವುದಾಗಿ ದೂರಲಾಗಿದೆ. ವರಲಕ್ಷ್ಮೀ ಮನೆಯವರು ವರದಕ್ಷಿಣೆ ರೂಪದಲ್ಲಿ ನೀಡಿದ್ದ ಚಿನ್ನಾಭರಣಗಳನ್ನು ಅಶೋಕ್ ಮಾರಾಟ ಮಾಡಿ, ಮತ್ತೆ ಹಣ ತರುವಂತೆ ಪೀಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
2018ರ ಜೂನ್-ಜುಲೈ ತಿಂಗಳಲ್ಲಿ ಎರಡೂವರೆ ತಿಂಗಳ ಗರ್ಭಿಣಿಯಾಗಿದ್ದ ವರಲಕ್ಷ್ಮೀ ಅವರಿಗೆ ಅಶೋಕ್ ಬಲವಂತವಾಗಿ ಗರ್ಭಪಾತ ಮಾತ್ರೆಗಳನ್ನು ನೀಡಿ, ಗರ್ಭಪಾತ ಮಾಡಿರುವುದಾಗಿ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ:498(ಎ), 324, 504, 506, 313 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.







