ವಿವಾದಾಸ್ಪದ ಸೌದಿ ಆ್ಯಪ್ ತೆಗೆಯಲು ಗೂಗಲ್ ನಕಾರ

ಸಾನ್‌ಫ್ರಾನ್ಸಿಸ್ಕೊ, ಮಾ. 4: ಪ್ರಯಾಣದಲ್ಲಿರುವ ಮಹಿಳೆಯರ ಮೇಲೆ ನಿಗಾ ಇಡಲು ಪುರುಷರಿಗೆ ಅವಕಾಶ ನೀಡುವ ಸೌದಿ ಅರೇಬಿಯದ ವಿವಾದಾಸ್ಪದ ಸರಕಾರಿ ಆ್ಯಪನ್ನು ತೆರವುಗೊಳಿಸಲು ಗೂಗಲ್ ನಿರಾಕರಿಸಿದೆ. ಈ ಆ್ಯಪ್ ತನ್ನ ‘ಪ್ಲೇ ಸ್ಟೋರ್’ ನೀತಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ಅದು ಹೇಳಿದೆ.
‘ಅಬ್‌ಶೇರ್’ ಎಂಬ ಹೆಸರಿನ ಆ್ಯಪ್ ತನ್ನ ಸೇವಾ ಷರತ್ತುಗಳನ್ನು ಉಲ್ಲಂಘಿಸುವುದಿಲ್ಲ ಎಂಬುದಾಗಿ ಗೂಗಲ್, ಕ್ಯಾಲಿಫೋರ್ನಿಯ ಡೆಮಾಕ್ರಟಿಕ್ ಸೆನೆಟರ್ ಜಾಕೀ ಸ್ಪೇಯರ್‌ಗೆ ವಿವರಣೆ ನೀಡಿದೆ ಎಂಬುದಾಗಿ ‘ಬಿಸ್ನೆಸ್ ಇನ್‌ಸೈಡರ್’ ರವಿವಾರ ವರದಿ ಮಾಡಿದೆ.
ಗೂಗಲ್ ಪ್ಲೇನಿಂದ ಈ ಆ್ಯಪನ್ನು ತೆಗೆಯಬೇಕು ಎಂಬುದಾಗಿ ಜಾಕೀ ಸ್ಪೇಯರ್ ಒತ್ತಾಯಿಸಿದ್ದರು.
ಸ್ಪೇಯರ್, ಇಲ್ಹಾನ್ ಉಮರ್, ರಶೀದಾ ತ್ಲೈಬ್ ಮತ್ತು ಇತರ 11 ಮಂದಿ, ಈ ಆ್ಯಪನ್ನು ಆ್ಯಪಲ್ ಮತ್ತು ಗೂಗಲ್ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದರು.
ಆ್ಯಪಲ್ ತನ್ನ ನಿರ್ಧಾರವನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ.
►ಅತ್ಯಂತ ಅತೃಪ್ತಿದಾಯಕ
ಗೂಗಲ್‌ನ ವಿವರಣೆ ‘‘ಅತ್ಯಂತ ಅತೃಪ್ತಿದಾಯಕ’’ ಎಂಬುದಾಗಿ ಸ್ಪೇಯರ್ ಬಣ್ಣಿಸಿದ್ದಾರೆ.
‘‘ಆ್ಯಪಲ್ ಮತ್ತು ಗೂಗಲ್‌ನಿಂದ ಈವರೆಗೆ ಸಿಕ್ಕಿದ ಪ್ರತಿಕ್ರಿಯೆಗಳು ಅತ್ಯಂತ ಅತೃಪ್ತಿದಾಯಕ. ಅಬ್ ಶೇರ್ ಆ್ಯಪ್‌ನ್ನು ಸುಲಭವಾಗಿ ತೆಗೆಯಬಹುದಾಗಿದ್ದರೂ, ಆ್ಯಪಲ್ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ಗಳಲ್ಲಿ ಅವುಗಳಲ್ಲಿ ಈ ಹೊತ್ತಿಗೂ ಲಭ್ಯವಿದೆ’’ ಎಂದು ಸ್ಪೇಯರ್ ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
►ಏನಿದು ‘ಅಬ್‌ಶೇರ್’ ಆ್ಯಪ್?
ಸೌದಿ ಅರೇಬಿಯದ ನಾಗರಿಕರು ‘ಅಬ್‌ಶೇರ್’ ಆ್ಯಪ್ ಬಳಸಿ ಸರಕಾರಿ ಸೇವೆಗಳನ್ನು ಪಡೆಯಬಹುದಾಗಿದೆ.
ಅದೂ ಅಲ್ಲದೆ, ಮಹಿಳೆಯರ ಪ್ರಯಾಣಕ್ಕೆ ಅನುಮತಿ ನೀಡಲು ಮತ್ತು ರದ್ದುಪಡಿಸಲು ಪುರುಷರಿಗೆ ಅವಕಾಶ ಮಾಡಿಕೊಡುವ ತಾಂತ್ರಿಕ ಅಂಶಗಳನ್ನೂ ಇದು ಒಳಗೊಂಡಿದೆ. ಮಹಿಳೆಯರು ತಮ್ಮ ಪಾಸ್‌ಪೋರ್ಟ್‌ಗಳನ್ನು ಬಳಸಿದಾಗ ಪುರುಷರಿಗೆ ಎಸ್‌ಎಂಎಸ್ ಮಾಹಿತಿಗಳು ಬರುವಂತೆ ವ್ಯವಸ್ಥೆಗೊಳಿಸಬಹುದಾಗಿದೆ.







