ಡಿಸ್ಲೆಕ್ಸಿಯಾ ಮಕ್ಕಳ ಅವಹೇಳನ: ಮೋದಿ ವಿರುದ್ಧ ರಾಷ್ಟ್ರಪತಿ, ವಿಶ್ವಸಂಸ್ಥೆ, ಎನ್‌ಎಚ್‌ಆರ್‌ಸಿಗೆ ದೂರು

ಹೊಸದಿಲ್ಲಿ, ಮಾ. 4: ಡಿಸ್‌ಲೆಕ್ಸಿಯಾ ಮಕ್ಕಳನ್ನು ಅವಹೇಳನ ಮಾಡಿರುವ ಆರೋಪದಲ್ಲಿ ನ್ಯಾಶನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಗೋವಾ ಘಟಕದ ಅಧ್ಯಕ್ಷ ಅಹ್ರಾಝ್ ಮುಲ್ಲಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಷ್ಟ್ರಪತಿ ರಾಮನಾಥ್ ಕೋವಿಂದ್, ವಿಶ್ವಸಂಸ್ಥೆ ಹಾಗೂ ಎನ್‌ಎಚ್‌ಆರ್‌ಸಿಗೆ ದೂರು ನೀಡಿದ್ದಾರೆ.
ವೀಡಿಯೊ ಕಾನ್ಫರೆನ್ಸ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ರಾಹುಲ್ ಗಾಂಧಿ ಅವರನ್ನು ಟೀಕಿಸುತ್ತಾ ಕಾಂಗ್ರೆಸ್ ಅಧ್ಯಕ್ಷ ಡಿಸ್ಲೆಕ್ಸಿಯಾದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು ಎಂದು ಮುಲ್ಲಾ ದೂರಿನಲ್ಲಿ ತಿಳಿಸಿದ್ದಾರೆ.
ಶನಿವಾರ ನಡೆದ ‘ಸ್ಮಾರ್ಟ್ ಇಂಡಿಯಾ ಹ್ಯಾಕ್‌ಥಾನ್ 2019’ ವೀಡಿಯೊ ಕಾನ್ಫರೆನ್ಸ್‌ನ ಸಂದರ್ಭ ಡೆಹ್ರಾಡೂನ್‌ನ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ಮೋದಿ ಅವರಿಗೆ ಯೋಜನೆಯೊಂದನ್ನು ಪರಿಚಯಿಸಿದ್ದಳು. ಓದಲು ಹಾಗೂ ಬರೆಯಲು ಸಮಸ್ಯೆ ಎದುರಿಸುತ್ತಿರುವ ಡಿಸ್‌ಲೆಕ್ಸಿಯಾ ವಿದ್ಯಾರ್ಥಿಗಳಿಗೆ ಇದು ನೆರವಾಗಲಿದೆ ಎಂದು ಆಕೆ ವಿವರಿಸಿದ್ದಳು.
ಈ ಸಂದರ್ಭ ಯುಪಿಎ ಅಧ್ಯಕ್ಷೆ ಹಾಗೂ ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅವರ ಬಗ್ಗೆ ವ್ಯಂಗ್ಯವಾಡಿದ ಪ್ರಧಾನಿ, ಇದು ನಿಜವಾಗಿಯೂ ಸಾಧ್ಯವಾಗುವುದಾದರೆ, ಇಂತಹ ಮಕ್ಕಳನ್ನು ಹೊಂದಿರುವ ತಾಯಂದಿರು ತುಂಬಾ ಸಂತೋಷಪಡಬಹುದು ಎಂದಿದ್ದರು.







