ಚಿನ್ನಾಭರಣದ ಜೊತೆಗೆ ಬೆಡ್‌ಶೀಟ್, ಲುಂಗಿ, ಚಪ್ಪಲಿ ಕಳವುಗೈದ ಖದೀಮರು !

ಮಂಗಳೂರು, ಮಾ.4: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಸೇರಿದಂತೆ ಬೆಡ್‌ಶೀಟ್, ಟವೆಲ್ಸ್, ಶೂ, ಚಪ್ಪಲಿ, ಲುಂಗಿಯನ್ನೂ ಬಿಡದೇ ಖದೀಮರು ಕಳವು ನಡೆಸಿದ ಘಟನೆ ನಗರದ ಮೊರ್ಗನ್ಸ್‌ಗೇಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ನಗರದ ಮೋರ್ಗನ್ಸ್‌ಗೇಟ್‌ನ ಅಪಾರ್ಟ್‌ಮೆಂಟ್ ನಿವಾಸಿ ಗಿಲ್ಬರ್ಟ್ ಮಿನೇಜಸ್ ಎಂಬವರ ಮನೆ ಕಳವಾಗಿರುವುದು.
ಗಿಲ್ಬರ್ಟ್ ಅವರು 2018ರ 20ರಂದು ಬೆಳಗ್ಗೆ 9:30ಕ್ಕೆ ಕೊಠಡಿಯ ಬಾಗಿಲಿಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದರು. ಮಾ.3ರಂದು ಸಂಜೆ 5:30ಕ್ಕೆ ಕೊಠಡಿಗೆ ವಾಪಸಾದಾಗ ಕೊಠಡಿಯ ಬಾಗಿಲಿಗೆ ಬೇರೆ ಬೀಗ ಹಾಕಿರುವುದು ಕಂಡು ಬಂದಿದೆ.
ಕೊಠಡಿಯಲ್ಲಿದ್ದ ಗೊದ್ರೇಜ್ ಲಾಕ್, ಆಸ್ತಿಗೆ ಸಂಬಂಧಿಸಿದ ದಾಖಲಾತಿ, ಕೇಸ್ ಫೈಲ್ಸ್, ಸುಮಾರು 30 ಗ್ರಾಂ ತೂಕದ ಬ್ರಾಸ್‌ಲೈಟ್, ಸುಮಾರು 6 ಗ್ರಾಂ ತೂಕದ ಉಂಗುರ, ನಗದು 30 ಸಾವಿರ ರೂ., 35 ಸಾವಿರ ರೂ. ಮೌಲ್ಯದ ಬಟ್ಟೆ, ಎರಡು ಸೂಟ್‌ಕೇಸ್, ಶೂಗಳು, ಚಪ್ಪಲಿಗಳು, ಕೊಡೆಗಳು, ಅಡುಗೆಯ ಸಾಮಾನುಗಳು, ಶೌಚಾಲಯದ ಸೊತ್ತುಗಳು, ಹೃದ್ರೋಗಕ್ಕೆ ಸಂಬಂಧಿಸಿದ ಔಷಧಿಗಳು, ಬೆಡ್‌ಶೀಟ್, ಟವೆಲ್ಸ್, ಲುಂಗಿ ಮತ್ತು ಇತರ ಬಟ್ಟೆಗಳನ್ನು ಕಳವುಗೈಯಲಾಗಿದೆ.
ಕಳವಾದ ಸೊತ್ತುಗಳ ಒಟ್ಟು ಮೌಲ್ಯದ ಎರಡು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಮಂಗಳೂರು ನಗರ ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ







