ರಾಜ್ಯ ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷರ ನೇಮಕಕ್ಕೆ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕಟಸ್ವಾಮಿ ಆಗ್ರಹ
"ದಲಿತರ ಮೇಲೆ ನಡೆದಿರುವ ದೌರ್ಜನ್ಯಗಳು ಅಧಿಕವಾಗುತ್ತಿವೆ"
ಆರೋಪ ಬೆಂಗಳೂರು, ಮಾ. 4: ರಾಜ್ಯದ ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷರ ಸ್ಥಾನ 10 ತಿಂಗಳಿಂದ ಖಾಲಿಯಾಗಿ ಉಳಿದಿದ್ದು, ದಲಿತರ ಮೇಲೆ ನಡೆದಿರುವ ದೌರ್ಜನ್ಯಗಳು ಅಧಿಕವಾಗುತ್ತಿವೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ ಆರೋಪ ಮಾಡಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ‘ಮೈತ್ರಿ ಸರಕಾರದ 9 ತಿಂಗಳು ದಲಿತ ಜನಾಂಗದ ಅಭಿವೃದ್ಧಿ? ಅಥವಾ ಅವನತಿ?’ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ 10 ತಿಂಗಳಿಂದ ರಾಜ್ಯದ ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡದೆ ದಲಿತ ಜನಾಂಗಕ್ಕೆ ದ್ರೋಹ ಬಗೆದಿದೆ. ಆಯೋಗಕ್ಕೆ ಅಧ್ಯಕ್ಷರ ನೇಮಕವಾಗದೇ ಸಾವಿರಾರು ದೂರುಗಳು ವಿಲೇವಾರಿಯಾಗದೆ ಉಳಿದಿವೆ. ಆದ್ದರಿಂದ ಈ ಕೂಡಲೇ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಸಿಎಂ ಎಚ್.ಡಿ.ಕುಮಾರಸ್ವಾಮಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದು, ಅವರ ದಲಿತ ವಿರೋಧಿ ಧೋರಣೆ ಹೀಗೆ ಮುಂದುವರೆದರೆ ಲೋಕಸಭೆಯಲ್ಲಿ ಸರಿಯಾದ ಪಾಠವನ್ನು ಸಮುದಾಯ ಕಲಿಸುತ್ತದೆ. ಅಲ್ಲದೆ, ದಲಿತ ಸಮಾಜವು ಶತಮಾನಗಳಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅವಕಾಶಗಳಿಂದ ವಂಚನೆಗೊಳಗಾಗಿದೆ. ಈಗಲೂ ಮೇಲ್ವರ್ಗದ ಮುಖಂಡರು ತಳ ಸಮುದಾಯದ ಜನರ ದನಿಯಾಗದೆ ಇರುವುದು ಬೇಸರದ ಸಂಗತಿ ಎಂದು ಹೇಳಿದರು.
ದಲಿತರ ಅಭ್ಯುದಯದ ಯೋಜನೆಗಳ ಫಲಾನುಭವಿಗಳ ಪಟ್ಟಿ ಸಿದ್ಧತೆಯಲ್ಲಿ ಶಾಸಕರ ಅಧ್ಯಕ್ಷತೆಯ ಸಮಿತಿಯನ್ನು ರದ್ದುಪಡಿಸಿ ಆಯಾ ಇಲಾಖೆ ಅಧಿಕಾರಿಗಳಿಗೆ ಫಲಾನಭವಿಗಳ ಆಯ್ಕೆ ಮಾಡುವ ಅಧಿಕಾರ ನೀಡಬೇಕು. ಹತ್ತು ಸಾವಿರ ಎಸ್ಸಿ-ಎಸ್ಟಿ ಗ್ರಾಮ ಸಹಾಯಕರನ್ನು ಖಾಯಂಗೊಳಿಸಬೇಕು ಹಾಗೂ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಪದ್ದತಿ ಜಾರಿಗೆ ತರಬೇಕು ಎಂದು ಒತ್ತಾಯ ಮಾಡಿದರು.
ಎಸ್ಸಿ- ಎಸ್ಟಿ ಪಂಗಡಗಳಲ್ಲಿನ ವಿವಿಧ ಉಪಜಾತಿಗಳ ಅಭಿವೃದ್ಧಿಗಾಗಿ ಅಸ್ತಿತ್ವಕ್ಕೆ ಬಂದಿರುವ ಉಪಜಾತಿಗಳ ಹೆಸರಿನಲ್ಲಿ ನಿಗಮ ಮಂಡಳಿಗಳಿಗೆ ಆಯಾ ಉಪಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸಮತಾ ಸೈನಿಕ ದಳದ ಡಾ.ಎಂ.ವೆಂಕಟಸ್ವಾಮಿ, ಬಹುಜನ ದಲಿತ ಸಂಘರ್ಷ ಸಮಿತಿಯ ಆರ್.ಎ.ಎನ್.ರಮೇಶ್, ದಲಿತ ರಕ್ಷಣಾ ವೇದಿಕೆಯ ಸೋರಹುಣಸೆ ವೆಂಕಟೇಶ್, ಅಖಿಲ ಭಾರತ ದಲಿತ ಹೋರಟ ಸಮಿತಿ ಎಂ.ಎಂ.ರಾಜು ಮತ್ತಿತರರು ಉಪಸ್ಥಿತರಿದ್ದರು.
ಸಮಸ್ತ ಅಲೆಮಾರಿಗಳ ಅಭಿವೃದ್ಧಿಗಾಗಿ ಅವರ ಜನಸಂಖ್ಯೆ ಆಧರಿಸಿ ಹಣ ಬಿಡುಗಡೆ ಮಾಡಬೇಕು. ಮಾಲದಾಸರಿ ನಿಗಮ ಸ್ಥಾಪನೆ ಮಾಡಿರುವ ರೀತಿಯಲ್ಲಿ ರಾಜ್ಯದಲ್ಲಿನ ಸಮಸ್ತ ಅಲೆಮಾರಿ ಸಮುದಾಯಗಳ ಅಧ್ಯಯನ ಅಭಿವೃದ್ಧಿಯ ಕೇಂದ್ರ ಸ್ಥಾಪನೆಯಾಗಬೇಕು.
-ಡಾ.ಎಂ. ವೆಂಕಟಸ್ವಾಮಿ, ದಲಿತ ಸಂಘಟನೆಗಳ ಒಕ್ಕೂಟ ಅಧ್ಯಕ್ಷ
ಮಾ.7ಕ್ಕೆ ಬೃಹತ್ ರ‍್ಯಾಲಿ
ದಲಿತ ನೌಕರರಿಗೆ ತಾರತಮ್ಯ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ.7 ರ ಬೆಳಗ್ಗೆ 10 ಗಂಟೆಗೆ ಪುರಭವನದಿಂದ ಸ್ವಾತಂತ್ರ ಉದ್ಯಾನವನದವರೆಗೂ ದಲಿತ ಸಂಘಟನೆಗಳ ಒಕ್ಕೂಟ ಬೃಹತ್ ರ‍್ಯಾಲಿ ಹಮ್ಮಿಕೊಂಡಿದೆ.







