ವಾಯುದಾಳಿಯನ್ನು ರಾಜಕೀಯಗೊಳಿಸಬೇಡಿ: ಮಾಜಿ ಗುಪ್ತಚರ ಮುಖ್ಯಸ್ಥ

ಹೊಸದಿಲ್ಲಿ,ಮಾ.4: ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಕೋಟ್‌ನ ಉಗ್ರರ ಶಿಬಿರಗಳ ಮೇಲೆ ನಡೆಸಿರುವ ದಾಳಿ ರಾಷ್ಟ್ರೀಯ ಭದ್ರತೆಯ ವಿಷಯವಾಗಿದ್ದು ಅದನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬೇಡಿ ಎಂದು ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (ಆರ್‌ಎಡಬ್ಲೂ-ರಾ)ದ ಮಾಜಿ ಮುಖ್ಯಸ್ಥ ಎ.ಎಸ್ ದುಲತ್ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದಾರೆ.
ಫೆಬ್ರವರಿ 27ರಂದು ಐಎಎಫ್ ನಡೆಸಿದ ವಾಯುದಾಳಿಯಲ್ಲಿ 250 ಉಗ್ರರನ್ನು ಹತ್ಯೆ ಮಾಡಲು ಪ್ರಧಾನಿ ಮೋದಿ ಕಾರಣ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ ಒಂದು ದಿನದ ನಂತರ ದುಲತ್ ಈ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ರಾಜಕೀಯ ನಡೆಸಬಾರದು. ಈ ದೇಶದ ಭದ್ರತೆ ಅತ್ಯುನ್ನತವಾಗಿದ್ದು ಅದನ್ನು ರಾಜಕೀಯ ಕಾರಣಗಳಿಗೆ ಅಥವಾ ಚುನಾವಣೆಗಳಿಗೆ ಬಳಸಬಾರದು ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾಜಿ ಗುಪ್ತಚರ ಮುಖ್ಯಸ್ಥ ತಿಳಿಸಿದ್ದಾರೆ. ವಾಯುದಾಳಿಯಲ್ಲಿ ಎಷ್ಟು ಉಗ್ರರು ಮೃತಪಟ್ಟಿದ್ದಾರೆ ಎನ್ನುವುದು ಮುಖ್ಯವಲ್ಲ. ಉಗ್ರರು ಹತರಾಗಿದ್ದಾರೆ ಎಂದಾದರೆ ಸಾಕು. ಅದರ ಬಗ್ಗೆ ವಾದ ಮಾಡುವ ಅಗತ್ಯವಿಲ್ಲ. ಪಾಕಿಸ್ತಾನ ಸರಕಾರವೇ ತಮ್ಮ ವಾಯುಪ್ರದೇಶ ಉಲ್ಲಂಘಿಸಿರುವುದಕ್ಕೆ ಭಾರತದ ವಿರುದ್ಧ ಪ್ರತಿಭಟನೆ ನಡೆಸಿರುವಾಗ ನಮ್ಮವರೇ ಈ ಕಾರ್ಯಾಚರಣೆಗೆ ಸಾಕ್ಷಿಗಳನ್ನು ಕೇಳುವುದು ಸರಿಯಲ್ಲ ಎಂದು ದುಲತ್ ಅಭಿಪ್ರಾಯಿಸಿದ್ದಾರೆ.







