ಉಗ್ರವಾದದ ವಿರುದ್ಧ ಯುದ್ಧ ಬೇಕು, ದೇಶದ ವಿರುದ್ಧ ಅಲ್ಲ: ಜಾನ್ ಅಬ್ರಹಾಂ

ಮುಂಬೈ,ಮಾ.4: ಉಗ್ರವಾದದ ವಿರುದ್ಧ ಹೋರಾಟ ನಡೆಸಬೇಕು ಆದರೆ ಒಂದು ದೇಶದ ಅಥವಾ ಧರ್ಮದ ವಿರುದ್ಧ ಯುದ್ಧ ಸಾರಬಾರದು ಎಂದು ಬಾಲಿವುಡ್ ನಟ ಜಾನ್ ಅಬ್ರಹಾಂ ಅಭಿಪ್ರಾಯಿಸಿದ್ದಾರೆ.
ಪುಲ್ವಾಮ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉಂಟಾಗಿರುವ ಉದ್ವಿಗ್ನತೆಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.
ಉಗ್ರವಾದದ ವಿರುದ್ಧ ಯುದ್ಧ ನಡೆಯಬೇಕು. ಯಾವುದೇ ದೇಶ, ಧರ್ಮ, ಅಥವಾ ಧರ್ಮಗಳ ನಡುವೆ ಅಲ್ಲ. ಈ ಬಗ್ಗೆ ನನ್ನ ಅನಿಸಿಕೆ ಸ್ಪಷ್ಟವಾಗಿದೆ. ಉಗ್ರವಾದವನ್ನು ದಮನಿಸಬೇಕು. ಅದರರ್ಥ ನೀವು ಇನ್ನೊಂದು ದೇಶದ ಜೊತೆ ಯುದ್ಧ ಮಾಡಬೇಕೆಂದಲ್ಲ. ಅದರರ್ಥ ನೀವು ಎಲ್ಲ ಜನರನ್ನು ಒಂದೇ ದೃಷ್ಟಿಯಿಂದ ನೋಡಬೇಕೆಂದಲ್ಲ ಎಂದು ಅಬ್ರಹಾಂ ತಿಳಿಸಿದ್ದಾರೆ. ಇಂದಿನ ಸಮಸ್ಯೆಯೆಂದರೆ ಜಗತ್ತು ಧ್ರುವೀಕರಣಗೊಳ್ಳುತ್ತಿದೆ. ನಾವು ಜನರನ್ನು ಒಂದೇ ಪಡಿಯಚ್ಚಿನಲ್ಲಿ ನೋಡುತ್ತಿದ್ದೇವೆ. ಅದು ಬಹುಶಃ ಅತ್ಯಂತ ಅಪಾಯಕಾರಿ ಸೂಚನೆ. ಹಾಗಾಗ ಬಾರದು. ಆದರೆ ಇಂದು ಜಗತ್ತು ಇದೇ ರೀತಿ ಕಾರ್ಯಾಚರಿಸುತ್ತಿದೆ ಎಂದು ಅಬ್ರಹಾಂ ಖೇದ ವ್ಯಕ್ತಪಡಿಸಿದ್ದಾರೆ. ತಮ್ಮ ಮುಂದಿನ ಸಿನೆಮಾ ರೋಮಿಯೊ ಅಕ್ಬರ್ ವಾಲ್ಟರ್ (ರಾ)ನ ಟ್ರೇಲರ್ ಬಿಡುಗಡೆ ಹಿನ್ನೆಲೆಯಲ್ಲಿ ಮಾತನಾಡುವ ವೇಳೆ ಅಬ್ರಹಾಂ ಈ ಹೇಳಿಕೆ ನೀಡಿದ್ದಾರೆ.





