ಮಾ.6ರಿಂದ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ-9
ಉಡುಪಿ, ಮಾ.4: ಮುದ್ರಾಡಿ ನಾಟ್ಕದೂರಿನ ನಮ ತುಳುವೆರ್ ಕಲಾ ಸಂಘಟನೆ ತನ್ನ 9ನೇ ವರ್ಷದ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ ಇದೇ ಮಾ.6ರಿಂದ 13ರವರೆಗೆ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 34 ವರ್ಷಗಳಿಂದ ಗ್ರಾಮೀಣ ಪ್ರದೇಶವಾದ ಮುದ್ರಾಡಿಯಲ್ಲಿ ಕಾರ್ಯಾಚರಿಸುತ್ತಿರುವ ನಮ ತುಳುವೆರ್ ಕಲಾ ಸಂಘಟನೆ, ಕಳೆದ 9 ವರ್ಷಗಳಿಂದ ರಾಷ್ಟ್ರೀಯ ರಂಗೋತ್ಸವದ ಮೂಲಕ ದೇಸಿಯತೆಗೆ ರಾಷ್ಟ್ರೀಯತೆಯನ್ನು ಬೆಸೆಯುವ ಕೆಲಸ ಮಾಡುತ್ತಿದೆ ಎಂದರು.
ನಾಟಕೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅವರು ಮಾ.6ರ ಬುಧವಾರ ಸಂಜೆ 6:30ಕ್ಕೆ ಉದ್ಘಾಟಿಸಲಿದ್ದಾರೆ. ಕಿಷನ್ ಹೆಗ್ಡೆ ಬೈಲೂರು, ಸೀತಾರಾಮ ಕುಮಾರ್ ಕಟೀಲ್, ಡಾ.ವಿರಾರ್ ಶಂಕರ್ ಬಿ.ಶೆಟ್ಟಿ, ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಶ್ರೀವೀರಭದ್ರ ಸ್ವಾಮಿ ದಶವತಾರ ಯಕ್ಷಗಾನ ಮಂಡಳಿಯಿಂದ ‘ಮುದ್ರಾಡಿ ಶ್ರೀಆದಿಶಕ್ತಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನವಿದೆ.
ಮಾ.7ರಂದು ಬೆಳಗ್ಗೆ 10:30ಕ್ಕೆ ಮುದ್ರಾಡಿ ಶಾಲೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ. ಸಂಜೆ ಮಂಗಳೂರಿನ ಅಸ್ತಿತ್ವ ತಂಡದಿಂದ ಕೊಂಕಣಿ ನಾಟಕ ‘ಅಂಕ್ವಾರ್ ಮೇಸ್ತ್ರಿ’ ಪ್ರದರ್ಶನಗೊಳ್ಳಲಿದೆ. 8ರಂದು ಲಕುಮಿ ತಂಡದಿಂದ ತುಳು ನಾಟಕ ‘ಮಂಗೆ ಮಲ್ಪೊಡ್ಚಿ’ ನಡೆಯಲಿದೆ. 9ರಂದು ಬೆಳಗ್ಗೆ ಹೆಬ್ರಿ ಸರಕಾರಿ ಕಾಲೇಜಿನಲ್ಲಿ ರಂಗಭೂಮಿ ಕುರಿತು ವಿಚಾರಸಂಕಿರಣ ಸಂಜೆ ಮಧ್ಯಪ್ರದೇಶದ ಲೋಕ್ ರಂಗದರ್ಪಣ ತಂಡದಿಂದ ಹಿಂದಿ ನಾಟಕ ‘ಟ್ಯಾಕ್ಸ್ ಪ್ರಿ’ ಪ್ರದರ್ಶನಗೊಳ್ಳಲಿದೆ ಎಂದರು.
ಮಾ.10ರಂದು ಮಹಾರಾಷ್ಟ್ರ ಕಲ್ಯಾಣ್ ತಂಡದಿಂದ ‘ಅಶಾಂತಿ ಪರ್ವ’ ಮರಾಠಿ ನಾಟಕ, 11ರಂದು ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ವಿವಿಯಿಂದ ಕುವೆಂಪು ಇವರ ‘ಶೂದ್ರ ತಪಸ್ವಿ’ ನಾಟಕ, 12ರಂದು ನಮ ತುಳುವೆರ್ ಕಲಾ ಸಂಘಟನೆಯ ಹೊಸ ತುಳು ನಾಟಕ ‘ಕಾತ್ಯಾಯಿನಿ’ ಪ್ರದರ್ಶನಗೊಳ್ಳಲಿದೆ ಎಂದರು.
ನಾಟಕೋತ್ಸವದ ಸಮಾರೋಪ ಸಮಾರಂಭ ಮಾ.13ರ ಬುಧವಾರ ಸಂಜೆ 6:00ಕ್ಕೆ ನಡೆಯಲಿದ್ದು, ಸಮಾರಂಭದಲ್ಲಿ ಬೆಂಗಳೂರಿನ ಖ್ಯಾತ ನಟ ಹಾಗೂ ಸಂಘಟಕ ಕೆ.ವಿ.ನಾಗರಾಜಮೂರ್ತಿ ಇವರನ್ನು ಈ ಬಾರಿಯ ‘ಮುದ್ರಾಡಿ ನಾಟ್ಕ ಸಂಮಾನ 2019 ರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಮೈಸೂರು ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯ್ ಕದಂ, ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಪಾಲ್ಗೊಳ್ಳುವರು ಎಂದು ಸುಕುಮಾರ್ ಮೋಹನ್ ವಿವರಿಸಿದರು.
ಅಂದು ಸಂಜೆ 7:00ರಿಂದ ಮೈಸೂರು ರಂಗಾಯಣ ತಂಡದಿಂದ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ನಾಟಕದ ಪ್ರದರ್ಶನವಿದೆ. ಕೆ.ಜಿ.ಮಹಾ ಬಲೇಶ್ವರ್ ಇವರ ನಿರ್ದೇಶನದಲ್ಲಿ ಈ ನಾಟಕ ಸತತ ಐದು ಗಂಟೆಗಳ ಕಾಲ ನಡೆಯಲಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸಂಸ್ಥಾಪಕ ಧರ್ಮಯೋಗಿ ಮೋಹನ್, ಉಮೇಶ್ ಕಲ್ಮಾಡಿ ಹಾಗೂ ಸಂದೇಶ್ ಕೋಟ್ಯಾನ್ ಉಪಸ್ಥಿತರಿದ್ದರು.







