ಭಾರತದ ವನಿತೆಯರಿಗೆ ಹೀನಾಯ ಸೋಲು
ಮೊದಲ ಟ್ವೆಂಟಿ-20 ಬೆಮೌಂಟ್ ಅರ್ಧಶತಕ

ಗುವಾಹಟಿ, ಮಾ.4: ಸ್ಮತಿ ಮಂಧಾನಾ ಮೊದಲ ಬಾರಿ ನಾಯಕತ್ವ ವಹಿಸಿದ್ದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 41 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ತಂಡ ಟ್ಯಾಮಿ ಬೆವೌಂಟ್ (62, 57 ಎಸೆತ) ಹಾಗೂ ನಾಯಕಿ ಹೀದರ್ ನೈಟ್ (40, 20 ಎಸೆತ) ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 160 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಜಮೆ ಮಾಡಿತು. ಆ ಬಳಿಕ ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಇಂಗ್ಲೆಂಡ್ ತಂಡಕ್ಕೆ ಬೆವೌಂಟ್ ಹಾಗೂ ಡ್ಯಾನಿಲ್ಲೆ ವ್ಯಾಟ್(35, 34 ಎಸೆತ)ಮೊದಲ ವಿಕೆಟ್ ಜೊತೆಯಾಟದಲ್ಲಿ ಭರ್ಜರಿ 89 ರನ್‌ಗಳ ಕೊಡುಗೆ ನೀಡಿದರು. ಇನಿಂಗ್ಸ್ ಕೊನೆಯಲ್ಲಿ ಮಿಂಚು ಹರಿಸಿದ ನಾಯಕಿ ಹೀದರ್ ನೈಟ್ 7 ಬೌಂಡರಿ ಬಾರಿಸಿ ತಮ್ಮ ತಂಡ ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಂಡರು. 161 ರನ್ ಗುರಿ ಬೆನ್ನಟ್ಟಿದ ಭಾರತದ ಆರಂಭವೇ ಉತ್ತಮವಾಗಿರಲಿಲ್ಲ. 23 ರನ್ ಆಗುವಷ್ಟರಲ್ಲಿ ಮೂವರು ಬ್ಯಾಟ್ಸ್ ವುಮನ್‌ಗಳು ಪೆವಿಲಿಯನ್ ಸೇರಿದ್ದರು. ಫಾರ್ಮ್‌ನಲ್ಲಿರುವ ಆಟಗಾರ್ತಿ ನಾಯಕಿ ಮಂಧಾನಾ (2) ಹಾಗೂ ಹಿರಿಯ ಆಟಗಾರ್ತಿ ಮಿಥಾಲಿ ರಾಜ್(7, 11 ಎಸೆತ) ಕೂಡ ಭಾರೀ ವೈಫಲ್ಯ ಕಂಡರು.
ವೇದಾ ಕೃಷ್ಣಮೂರ್ತಿ(15), ದೀಪ್ತಿ ಶರ್ಮಾ (ಅಜೇಯ 22) ಅರುಂಧತಿ ರೆಡ್ಡಿ (18) ಹಾಗೂ ಶಿಖಾ ಪಾಂಡೆ(23) ಉತ್ತಮ ಬ್ಯಾಟಿಂಗ್ ನಡೆಸಿದರೂ ಅದು ಗೆಲುವಿಗೆ ಸಾಕಾಗಲಿಲ್ಲ. ಇನ್ನೊಂದು ಅಚ್ಚರಿಯ ಅಂಶವೆಂದರೆ ಇಂಗ್ಲೆಂಡ್ ಭಾರತದ ಇನಿಂಗ್ಸ್ ನಲ್ಲಿ 22 ಇತರ ರನ್‌ಗಳ ಕೊಡುಗೆ ನೀಡಿದೆ. 18 ವೈಡ್‌ಗಳನ್ನು ಎಸೆದಿದ್ದರೂ ಅದನ್ನು ಭಾರತ ಸೂಕ್ತವಾಗಿ ಬಳಸಿಕೊಳ್ಳಲಿಲ್ಲ.
►ಟಿ-20ಯಲ್ಲಿ ಸತತ 5ನೇ ಸೋಲು
ಟಿ20ಯಲ್ಲಿ ಭಾರತ ಸತತ 5ನೇ ಪಂದ್ಯದಲ್ಲಿ ಸೋಲು ಕಂಡಿದ್ದು ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಕೋಚ್ ಡಬ್ಲು. ವಿ. ರಾಮನ್ ಮಾರ್ಗದರ್ಶನದಲ್ಲಿ ತಂಡ ಕಠಿಣ ಪರಿಶ್ರಮಪಡಬೇಕಾದ ಅಗತ್ಯವನ್ನು ಸಾಕ್ಷೀಕರಿಸಿದೆ.
ನ್ಯೂಝಿಲೆಂಡ್ ತಂಡದ ವಿರುದ್ಧ ಅದರದ್ದೇ ನೆಲದಲ್ಲಿ ಭಾರತ ಏಕದಿನ ಸರಣಿ ಗೆದ್ದ ಬಳಿಕ ನಡೆದ ಟಿ20 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಅದೇ ರೀತಿಯಲ್ಲಿ ಇಂಗ್ಲೆಂಡ್ ತಂಡದ ವಿರುದ್ಧವೂ ಏಕದಿನ ಸರಣಿ ಗೆದ್ದ ಆತಿಥೇಯರು ಮೊದಲ ಟಿ20 ಪಂದ್ಯದಲ್ಲಿ ಸೋಲು ಕಂಡಿದ್ದಾರೆ.
ಭಾರತ ಟಿ20 ತಂಡದ ಅತಿ ಕಿರಿಯ ವಯಸ್ಸಿನ ನಾಯಕಿಯಾಗಿರುವ 22 ವರ್ಷದ ಮಂಧಾನಾ, ‘‘ಡೆತ್ ಓವರ್‌ಗಳಲ್ಲಿ ಭಾರತದ ಬೌಲಿಂಗ್ ಬಲಿಷ್ಠವಾಗಬೇಕಿದೆ’’ ಎಂದು ಹೇಳಿದ್ದಾರೆ.







