2022ರ ಏಶ್ಯನ್ ಗೇಮ್ಸ್: ಸಮನ್ವಯ ಸಮಿತಿ ಅಧ್ಯಕ್ಷರಾಗಿ ರಣಧೀರ್ ಸಿಂಗ್ ಆಯ್ಕೆ

ಹೊಸದಿಲ್ಲಿ, ಮಾ.4: ಭಾರತದ ಹಿರಿಯ ಕ್ರೀಡಾ ಆಡಳಿತಾಧಿಕಾರಿ ರಣಧೀರ್ ಸಿಂಗ್ 2022ರಲ್ಲಿ ಹಾಂಗ್‌ಝೌ ನಡೆಯಲಿರುವ ಏಶ್ಯನ್ ಗೇಮ್ಸ್ ನ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಏಶ್ಯಾ ಒಲಿಂಪಿಕ್ಸ್ ಕೌನ್ಸಿಲ್(ಒಸಿಎ)ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಣಧೀರ್ 1991ರಿಂದ 2015ರ ತನಕ 24 ವರ್ಷಗಳ ಕಾಲ ಒಸಿಎ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಐದು ಬಾರಿಯ ಒಲಿಂಪಿಯನ್ ಶೂಟರ್ 72ರ ವಯಸ್ಸಿನ ರಣಧೀರ್ ಪ್ರಸ್ತುತ ಒಸಿಎ ಗೌರವ ಆಜೀವ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1987ರಿಂದ 2012ರ ತನಕ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ರಣಧೀರ್ ಕಾರ್ಯನಿರ್ವಹಿಸಿದ್ದರು. ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಗೌರವ ಸದಸ್ಯರಾಗುವ ಮೊದಲು 2001ರಿಂದ 2014ರ ತನಕ ಪೂರ್ಣಕಾಲಿಕ ಸದಸ್ಯರಾಗಿದ್ದರು.
‘‘ಏಶ್ಯನ್ ಗೇಮ್ಸ್ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಇದೊಂದು ಮಹಾ ಗೌರವ ಹಾಗೂ ಜವಾಬ್ದಾರಿಯಾಗಿದೆ’’ಎಂದು ಒಸಿಎ ಸಾಮಾನ್ಯ ಸಭೆ ನಡೆಯುತ್ತಿರುವ ಬ್ಯಾಂಕಾಕ್‌ನಿಂದ ಪಿಟಿಐಗೆ ಸಿಂಗ್ ಪ್ರತಿಕ್ರಿಯಿಸಿದರು.





