ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ನಿಂದ ತಾಹಿರ್ ನಿವೃತ್ತಿ

ಡರ್ಬನ್, ಮಾ.4: ಈ ವರ್ಷಾಂತ್ಯದಲ್ಲಿ ನಡೆಯುವ 2019ರ ಐಸಿಸಿ ವಿಶ್ವಕಪ್ ಬಳಿಕ ಏಕದಿನ ಪಂದ್ಯಗಳಿಗೆ ದ.ಆಫ್ರಿಕದ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ನಿವೃತ್ತಿ ಹೇಳಲಿರುವುದಾಗಿ ವರದಿಯಾಗಿದೆ. ದ.ಆಫ್ರಿಕ ಪರ ಇಲ್ಲಿಯವರೆಗೆ 95 ಏಕದಿನ ಪಂದ್ಯಗಳನ್ನಾಡಿರುವ ತಾಹಿರ್, ಇನ್ನು ಕೆಲವೇ ದಿನಗಳಲ್ಲಿ ತಮ್ಮ 40ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಲಾಹೋರ್ ಮೂಲದ ಲೆಗ್‌ಸ್ಪಿನ್ನರ್ 2011ರಲ್ಲಿ ಆಫ್ರಿಕ ಪರ ತಮ್ಮ ಮೊದಲ ಪಂದ್ಯವನ್ನಾಡಿದ್ದರು.
ಕ್ರಿಕೆಟ್ ದ.ಆಫ್ರಿಕ ತಾಹಿರ್ ನಿವೃತ್ತಿ ವಿಷಯವನ್ನು ತನ್ನ ಟ್ವಿಟರ್ ಪೇಜ್‌ನಲ್ಲಿ ದೃಢಪಡಿಸಿದೆ. ‘‘2019ರ ವಿಶ್ವಕಪ್ ತಾಹಿರ್ ಅವರ ಕೊನೆಯ ಏಕದಿನ ಪ್ರದರ್ಶನವಾಗಲಿದೆ. 39 ವರ್ಷದ ಆಟಗಾರ ಟಿ20 ಪಂದ್ಯಗಳಿಗೆ ತಂಡಕ್ಕೆ ಲಭ್ಯವಿರಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚು ಅವಕಾಶ ಸಿಗಬೇಕೆಂದು ಅವರು ಬಯಸಿದ್ದಾರೆ’’ ಎಂದು ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದೆ. ಏಕದಿನ ಪಂದ್ಯಗಳಿಗೆ ವಿದಾಯದ ಬಳಿಕ ವಿಶ್ವದ ಹಲವು ಟಿ20 ಲೀಗ್‌ಗಳಲ್ಲಿ ಆಡುವ ಉದ್ದೇಶವನ್ನು ತಾಹಿರ್ ಹೊಂದಿದ್ದಾರೆ. ‘‘ನಾನು ಯಾವಾಗಲೂ ವಿಶ್ವಕಪ್‌ನಲ್ಲಿ ಆಡಲು ಬಯಸುತ್ತಿದ್ದೆೆ’’ ಎಂದು ತಾಹಿರ್ ಹೇಳಿದ್ದಾಗಿ ಸ್ಪೋರ್ಟ್24 ಎಂಬ ಸುದ್ದಿತಾಣ ತಿಳಿಸಿದೆ. ‘‘ ದ.ಆಫ್ರಿಕದಂತಹ ಮಹಾನ್ ತಂಡದಲ್ಲಿ ಆಡಲು ಅವಕಾಶ ದೊರೆತದ್ದು ನನ್ನ ಮಹಾ ಸಾಧನೆ. ದ.ಆಫ್ರಿಕ ಕ್ರಿಕೆಟ್ ಮಂಡಳಿ ಹಾಗೂ ನನ್ನ ಮಧ್ಯೆ ಪರಸ್ಪರ ಹೊಂದಾಣಿಕೆ ಇದೆ. ವಿಶ್ವಕಪ್‌ಬಳಿಕ ನಿವೃತ್ತಿ ಹೇಳಲಿದ್ದೇನೆ. ಹೀಗಾಗಿಯೇ ನಾನು ಅಲ್ಲಿಯವರೆಗೆ ದ.ಆಫ್ರಿಕ ಜೊತೆ ಒಪ್ಪಂದ ಮಾಡಿಕೊಂಡಿದ್ದೇನೆ. ನನ್ನಿಂದ ಎಷ್ಟು ಸಾಧ್ಯವೊ ಅಷ್ಟು ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ’’ ಎಂದು ತಾಹಿರ್ ಹೇಳಿದ್ದಾಗಿ ವರದಿಯಾಗಿದೆ.





