ತೆಂಡುಲ್ಕರ್, ದ್ರಾವಿಡ್ ಕ್ಲಬ್ ಸೇರುವತ್ತ ಧೋನಿ

ಹೊಸದಿಲ್ಲಿ, ಮಾ.4: ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ 2019ರಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಆಸೀಸ್ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿ ತನ್ನ ಶ್ರೇಷ್ಠ ಫಾರ್ಮನ್ನು ಮುಂದುವರಿಸಿದ್ದರು. ಈ ವರ್ಷ ಧೋನಿ 150.50ರ ಸರಾಸರಿಯಲ್ಲಿ 301 ರನ್ ಗಳಿಸಿದ್ದಾರೆ. ಈ ವರ್ಷ ದಾಂಡಿಗನೊಬ್ಬನ ಉತ್ತಮ ಪ್ರದರ್ಶನ ಇದಾಗಿದೆ. ಧೋನಿ ಆಸೀಸ್ ವಿರುದ್ಧ ಸತತ 4 ಅರ್ಧಶತಕ ಹಾಗೂ ಒಟ್ಟು 1,600 ರನ್ ಗಳಿಸಿದ್ದಾರೆ. ಇದೀಗ ಅವರು ಆಸೀಸ್ ವಿರುದ್ಧ ಗರಿಷ್ಠ ಸ್ಕೋರ್ ಗಳಿಸಿರುವ ಭಾರತದ 3ನೇ ದಾಂಡಿಗ. 13ನೇ ಬಾರಿ ಫಿಫ್ಟಿಪ್ಲಸ್ ಸ್ಕೋರ್ ಗಳಿಸಿ ಸಚಿನ್ ತೆಂಡುಲ್ಕರ್ ಬಳಿಕ ಆಸೀಸ್ ವಿರುದ್ಧ ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರನಾಗಿದ್ದಾರೆ.
ಧೋನಿ ತನ್ನ ಯಶಸ್ವಿ ವೃತ್ತಿಜೀವನದಲ್ಲಿ ಮತ್ತೊಂದು ಮೈಲುಗಲ್ಲು ತಲುಪುವ ಹಾದಿಯಲ್ಲಿದ್ದು, ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ 17,000 ರನ್ ಪೂರೈಸಿದ ಭಾರತದ ಆರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಅವರಿಗೆ ಇನ್ನು ಕೇವಲ 33 ರನ್ ಅಗತ್ಯವಿದೆ.
ಈ ಸಾಧನೆ ಮಾಡಿದ ಭಾರತ ಇತರ ಆಟಗಾರರೆಂದರೆ: ಸಚಿನ್ ತೆಂಡುಲ್ಕರ್(34,357), ರಾಹುಲ್ ದ್ರಾವಿಡ್(24,208), ವಿರಾಟ್ ಕೊಹ್ಲಿ(19,453), ಸೌರವ್ ಗಂಗುಲಿ(18,575) ಹಾಗೂ ವೀರೇಂದ್ರ ಸೆಹ್ವಾಗ್(17,253). ತನ್ನ 14 ವರ್ಷಗಳ ವೃತ್ತಿಜೀವನದಲ್ಲಿ ಧೋನಿ ಟೆಸ್ಟ್ ನಲ್ಲಿ 4,876 ರನ್, ಏಕದಿನದಲ್ಲಿ 10,474 ರನ್ ಹಾಗೂ ಟಿ-20ಯಲ್ಲಿ 1,617 ರನ್ ಕಲೆ ಹಾಕಿದ್ದಾರೆ.
2ನೇ ಏಕದಿನ ಪಂದ್ಯ ನಡೆಯಲಿರುವ ನಾಗ್ಪುರದ ವಿಸಿಎ ಸ್ಟೇಡಿಯಂ ಧೋನಿ ಪಾಲಿಗೆ ಅದೃಷ್ಟದ ತಾಣವಾಗಿದೆ. ಅವರು ಇಲ್ಲಿ ಆಡಿರುವ 5 ಪಂದ್ಯಗಳಲ್ಲಿ 2 ಶತಕ ಸಹಿತ 268 ರನ್ ಗಳಿಸಿದ್ದಾರೆ. ಇದು ಭಾರತೀಯ ದಾಂಡಿಗನೊಬ್ಬನ ಉತ್ತಮ ಸಾಧನೆಯಾಗಿದೆ. ಭಾರತ ನಾಯಕ ವಿರಾಟ್ ಕೊಹ್ಲಿ 4 ಪಂದ್ಯಗಳಲ್ಲಿ 209 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.







