ಐಸಿಸಿಗೆ ಪತ್ರವನ್ನು ನಾನು ಬರೆದಿಲ್ಲ: ಅಮಿತಾಭ್ ಚೌಧರಿ
ಮುಂಬೈ, ಮಾ.4: ಭಯೋತ್ಪಾದನೆಯನ್ನು ಪೋಷಿಸುವ ದೇಶಗಳೊಡನೆ ಕ್ರೀಡಾ ಸಂಬಂಧ ಕಡಿತಗೊಳಿಸುವಂತೆ ಒತ್ತಾಯಿಸಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬರೆದ ಪತ್ರದಲ್ಲಿ ತನ್ನ ಕೈವಾಡವಿಲ್ಲ ಎಂದು ಸೋಮವಾರ ಬಿಸಿಸಿಐನ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆ.
ಬಿಸಿಸಿಐನ ಮನವಿಯನ್ನು ಐಸಿಸಿ ತಳ್ಳಿಹಾಕಿದ್ದು, ಇಂತಹ ವಿಷಯಗಳಲ್ಲಿ ಕ್ರಮ ಕೈಗೊಳ್ಳಲು ನಮಗೆ ಅಧಿಕಾರವಿಲ್ಲ ಎಂದು ಹೇಳಿತ್ತು. ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ‘‘ ಬಿಸಿಸಿಐ ಬರೆದ ಪತ್ರದಲ್ಲಿ ಭಯೋತ್ಪಾದನೆಯನ್ನು ಪೋಷಿಸುವ ರಾಷ್ಟ್ರಗಳು ಎಂಬಲ್ಲಿ ವಿಶೇಷವಾಗಿ ಪಾಕಿಸ್ತಾನವನ್ನು ಹೆಸರಿಸದಿದ್ದುದು ಒಂದು ತಪ್ಪಾಗಿತ್ತೆ’’ಎಂಬ ಪ್ರಶ್ನೆಗೆ ಉತ್ತರಿಸಿದ ಚೌಧರಿ ‘‘ನಾನು ಆ ಪತ್ರ ಬರೆದಿಲ್ಲ’’ಎಂದು ನುಣುಚಿಕೊಂಡರು.
ಪುಲ್ವಾಮದಲ್ಲಿ ನಡೆದ ಮಾರಣಾಂತಿಕ ಭಯೋತ್ಪಾದಕ ದಾಳಿಯಲ್ಲಿ 40ಕ್ಕಿಂತ ಹೆಚ್ಚು ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಬಳಿಕ ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಜೈಶ್-ಇ- ಮುಹಮ್ಮದ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿತ್ತು. ಆ ಬಳಿಕ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಬಿಸಿಸಿಐನ ಆಡಳಿತಗಾರರ ಸಮಿತಿಯೊಂದಿಗೆ (ಸಿಒಎ) ಪರಾಮರ್ಶಿಸಿ ಐಸಿಸಿಗೆ ಬರೆದ ಪತ್ರವನ್ನು ಸಿದ್ಧಪಡಿಸಿದ್ದರು. ‘‘ಕ್ರಿಕೆಟ್ ಸಂಬಂಧ ಕಡಿತಗೊಳಿಸುವಂತೆ ಬಿಸಿಸಿಐ ಮನವಿ ಕುರಿತು ಮಾತನಾಡಿದ್ದ ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್, ಇದು ಐಸಿಸಿ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದರು’’ ಎಂದು ಚೌಧರಿ ಹೇಳಿದ್ದಾರೆ.







