ಜೂನಿಯರ್ ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಉಳಿಸಿಕೊಳ್ಳಲು ಸರಕಾರ ಭರವಸೆ ನೀಡಲಿ
ಡಬ್ಲುಎಫ್‌ಐ

ಹೊಸದಿಲ್ಲಿ, ಮಾ.5: ಪಾಕಿಸ್ತಾನ ಹಾಗೂ ಭಾರತದ ಮಧ್ಯೆ ಇರುವ ರಾಜಕೀಯ ಒತ್ತಡಗಳಿಂದ ಅಂತರ್‌ರಾಷ್ಟ್ರೀಯ ಕ್ರೀಡಾಕೂಟಗಳು ಭಾರತದ ಆತಿಥ್ಯದಿಂದ ಕೈಜಾರುವಂತಾಗಬಾರದು. ಈ ಕುರಿತು ಸರಕಾರದಿಂದ ಖಚಿತ ಭರವಸೆಯನ್ನು ಎದುರುನೋಡುತ್ತಿದ್ದೇವೆ ಎಂದು ಭಾರತದ ಕುಸ್ತಿ ಒಕ್ಕೂಟ (ಡಬ್ಲುಎಫ್‌ಐ) ಮಂಗಳವಾರ ಹೇಳಿದೆ.
ಈ ಕುರಿತು ಮಾತನಾಡಿರುವ ಡಬ್ಲುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್, ಅಂತರ್‌ರಾಷ್ಟ್ರೀಯ ಒಕ್ಕೂಟಗಳಿಗೆ ವಿಶ್ವ ಕುಸ್ತಿ ಒಕ್ಕೂಟವು ಭಾರತದೊಂದಿಗೆ ಸಂಪರ್ಕ ಕಡಿದುಕೊಳ್ಳುವಂತೆ ಕೇಳಿಕೊಂಡಿದ್ದು, ಇದರಿಂದ ಭಾರತ ಜುಲೈನಲ್ಲಿ ಆಯೋಜಿಸಬೇಕಿದ್ದ ಜೂನಿಯರ್ ಏಶ್ಯನ್ ಚಾಂಪಿಯನ್‌ಶಿಪ್ ಆತಿಥ್ಯವನ್ನು ಕಳೆದುಕೊಳ್ಳುವ ಅಪಾಯ ಎದುರಿಸಬೇಕಾಗಬಹುದು ಎಂದು ಹೇಳಿದ್ದಾರೆ.
‘‘ನಾವು ಈ ಕುರಿತು ಭಾರತ ಸರಕಾರಕ್ಕೆ ಪತ್ರ ಬರೆಯಲಿದ್ದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಳಿಕೊಳ್ಳುತ್ತೇವೆ. ಕುಸ್ತಿ ಹಾಗೂ ಕುಸ್ತಿಪಟುಗಳು ತೊಂದರೆ ಅನುಭವಿಸಬಾರದು. ರಾಜಕೀಯದ ಒತ್ತಡಗಳ ಮಧ್ಯೆ ಕ್ರೀಡೆಗೆ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡುವಂತೆ ಒತ್ತಾಯಿಸುತ್ತೇವೆ’’ ಎಂದು ಇತ್ತೀಚೆಗೆ ಮೂರನೇ ಬಾರಿ ಡಬ್ಲುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬ್ರಿಜ್‌ಭೂಷಣ್ ತಿಳಿಸಿದ್ದಾರೆ.
ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ದಿಲ್ಲಿಯಲ್ಲಿ ನಡೆದ ವಿಶ್ವ ಶೂಟಿಂಗ್ ಸ್ಪರ್ಧೆಯಲ್ಲಿ ಪಾಕಿಸ್ತಾನದ ಆಟಗಾರರಿಗೆ ವೀಸಾ ನೀಡಲು ನಿರಾಕರಿಸಿರುವುದನ್ನು ಮುಂದಿಟ್ಟುಕೊಂಡು ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಭಾರತ ಭವಿಷ್ಯದಲ್ಲಿ ಆಯೋಜಿಸುವ ಟೂರ್ನಿಗಳ ಮಾತುಕತೆಗೆ ತಾತ್ಕಾಲಿಕ ನಿಷೇಧ ಹೇರಿತ್ತು. ಈ ನಿರ್ಧಾರದ ಬಳಿಕ ವಿಶ್ವ ಕುಸ್ತಿ ಒಕ್ಕೂಟದ ಆದೇಶ ಹೊರಬಿದ್ದಿತ್ತು.
ಜುಲೈ 9ರಿಂದ 14ರವೆರೆಗೆ ಜೂನಿಯರ್ ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್ ನಡೆಯಬೇಕಿದೆ.







