ಪುತ್ತೂರು: ಅಡಕೆ ಗೋದಾಮಿಗೆ ಬೆಂಕಿ; ಲಕ್ಷಾಂತರ ನಷ್ಟ

ಪುತ್ತೂರು: ಅಡಕೆ, ತೆಂಗಿನಕಾಯಿ ದಾಸ್ತಾನು ಕೊಠಡಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಮಂಗಳವಾರ ರಾತ್ರಿ ಪುತ್ತೂರು ತಾಲೂಕಿನ ಕೆದಂಬಾಡಿ ಬೀಡು ಎಂಬಲ್ಲಿ ನಡೆದಿದೆ.
ಇಲ್ಲಿನ ರಂಗಯ್ಯ ಬಲ್ಲಾಳ್ ಎಂಬವರಿಗೆ ಸೇರಿದ ಅಡಕೆ, ತೆಂಗಿನಕಾಯಿ ದಾಸ್ತಾನು ಗೋದಾಮಿಗೆ ರಾತ್ರಿ ಸಮಯದಲ್ಲಿ ಬೆಂಕಿ ಹತ್ತಿಕೊಂಡಿದ್ದು ಸುಮಾರು 25ಕ್ಕೂ ಅಧಿಕ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಅಡಕೆ, ಸುಮಾರು 250ಕ್ಕೂ ಅಧಿಕ ತೆಂಗಿನ ಕಾಯಿ ಸುಟ್ಟು ಭಸ್ಮವಾಗಿದೆ. ಇದರೊಂದಿಗೆ ಹತ್ತಿರದಲ್ಲಿದ್ದ ದನದ ಹಟ್ಟಿಗೂ ಬೆಂಕಿ ಆವರಿಸಿ ಹಾನಿಯುಂಟಾಗಿದೆ. ಘಟನೆಯಿಂದ ಸುಮಾರು 1.50 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ರಂಗಯ್ಯ ಬಲ್ಲಾಳ್‍ರವರು ಕಂದಾಯ ಇಲಾಖೆಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು, ತಾಪಂ ಮಾಜಿ ಅಧ್ಯಕ್ಷೆ ಭವಾನಿ ಚಿದಾನಂದ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕೆದಂಬಾಡಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ರತನ್ ರೈ ಕುಂಬ್ರ, ಕಾರ್ಯದರ್ಶಿ ಭಾಸ್ಕರ ಬಲ್ಲಾಳ್, ಬೂತ್ ಅಧ್ಯಕ್ಷ ಯಶೋಧರ ಚೌಟ, ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಾಘವ ಗೌಡ ಕೆರೆಮೂಲೆ, ವಿಜಯ ಕುಮಾರ್ ರೈ ಕೋರಂಗ, ಪುಷ್ಪಾ ಬೋಳೋಡಿ, ಗ್ರಾಮ ಕರಣಿಕರಾದ ಅಶ್ವಿನಿ, ಸಹಾಯಕ ಶ್ರೀಧರ್ ಮತ್ತಿತರರು ಭೇಟಿ ನೀಡಿದ್ದಾರೆ.







