ಉಡುಪಿ: ಅಂತರ್ ಕಾಲೇಜು ಪುರುಷರ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

ಉಡುಪಿ, ಮಾ.6: ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಲಾದ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜು ಪುರುಷರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕೂಟಕ್ಕೆ ಅದಮಾರು ಶ್ರೀ ವಿಶ್ವ ಪ್ರಿಯತೀರ್ಥ ಸ್ವಾಮೀಜಿ ಚಾಲೆ ನೀಡಿದರು.
ಬಳಿಕ ಮಾತನಾಡಿದ ಸ್ವಾಮೀಜಿ, ಏಕಾಗ್ರತೆಯನ್ನು ಹೆಚ್ಚಿಸುವ ಕ್ರೀಡೆ ಕಬ್ಬಡಿ ಆಗಿದೆ. ದೇಹಕ್ಕೆ ಮಣ್ಣನ್ನು ಮೆತ್ತಿಕೊಂಡು ಆಡುವ ಕಬಡ್ಡಿಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಇದರಲ್ಲಿ ಸೋತವರಿಗೂ ಗೆದ್ದವರಿಗೂ ಆರೋಗ್ಯ ಸಿಗುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಕೂಡ ದೊರೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತ ಗುರುರಾಜ್ ಪೂಜಾರಿ, ಕ್ರೀಡೆಯಲ್ಲಿ ಗ್ರಾಮೀಣ ಪ್ರದೇಶದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆಯಬೇಕಾದರೆ ಸಾಕಷ್ಟು ಶ್ರಮ ವಹಿಸಬೇಕಾಗಿದೆ. ನಾನು ಅದಕ್ಕಾಗಿ ಎಂಟು ವರ್ಷಗಳ ಕಾಲ ಶ್ರಮಿಸಿದ್ದೇನೆ. 2020ರ ಒಲಂಪಿಕ್‌ಗೆ ಆಯ್ಕೆಯಾಗಲು ವರ್ಲ್ಡ್ ಚಾಂಪಿಯನ್‌ಶಿಪ್ ಹಾಗೂ ಏಶಿಯನ್ ಗೇಮ್ಸ್‌ನಲ್ಲಿ ಆಡಬೇಕಾಗಿದೆ. ಅದಕ್ಕಾಗಿ ಎ.1ರಿಂದ ಭಾರತೀಯ ಶಿಬಿರದಲ್ಲಿ ತರಬೇತಿ ಪಡೆಯಲಾಗುವುದು ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ವಹಿಸಿದ್ದರು. ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕಾಲೇಜಿನ ಪಾಂಶುಪಾಲೆ ಸುಕನ್ಯಾ ಮೇರಿ ಜೆ. ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ್ ಜೋಗಿ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ರಾಮಕೃಷ್ಣ ಉಡುಪ ವಂದಿಸಿದರು. ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು. ಪಂದ್ಯಕೂಟದಲ್ಲಿ ಒಟ್ಟು 12 ಕಾಲೇಜುಗಳ ತಂಡಗಳು ಭಾಗವಹಿಸಿವೆ.







