ಮಾ.10ಕ್ಕೆ ‘ಪಲ್ಸ್ ಪೋಲಿಯೊ’ ಅಭಿಯಾನ: ಆರೋಗ್ಯ ಸಚಿವ ಶಿವಾನಂದ ಪಾಟೀಲ್

ಬೆಂಗಳೂರು, ಮಾ. 6: ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಒಂದೇ ಸುತ್ತಿನ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನವನ್ನು ಮಾ.10ರಂದು ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೋಲಿಯೋ ಸೋಂಕು ಮಕ್ಕಳಲ್ಲಿ ತೀವ್ರತರವಾದ ಅಸ್ವಸ್ಥತೆ ಮತ್ತು ಪಾರ್ಶ್ವವಾಯು ಉಂಟುಮಾಡಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ. 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ಪತ್ತೆಯಾದ ಪೋಲಿಯೋ ಭಾರತದ ಕೊನೆಯ ಪ್ರಕರಣ. ಭಾರತಕ್ಕೆ 2014ರಲ್ಲಿ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಬಿರುದನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಇತ್ತೀಚೆಗೆ ಅಫ್ಫಾನಿಸ್ತಾನದಲ್ಲಿ 2 ಹಾಗೂ ಪಾಕಿಸ್ತಾನದಲ್ಲಿ 4 ಪೋಲಿಯೋ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕಾ ಅಭಿಯಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಾ.10ರಂದು ನಡೆಯುವ ಈ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಎಂದಿನಂತೆ ಪ್ರತಿ ಶಿಶುಗೆ 5ವರಸೆ ಒಪಿ (ಓರಲ್ ಪೋಲಿಯೋ ವ್ಯಾಕ್ಸಿನ್) ಮತ್ತು 2 ವರಸೆ ಐಪಿ(ಇನ್‌ಜಕ್ಟಬಲ್ ಪೋಲಿಯೋ ವ್ಯಾಕ್ಸಿನ್) ಲಸಿಕೆಗಳನ್ನು ನೀಡಲಾಗುತ್ತಿದೆ. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳುವ ಗುರಿ ಹೊಂದಲಾಗಿದೆ ಎಂದರು.
ರಾಜ್ಯದಲ್ಲಿ ಹಳ್ಳಿ, ಗುಡ್ಡಗಾಡು ಪ್ರದೇಶ, ಕಾಮಗಾರಿ ವಲಸೆ ಪ್ರದೇಶಗಳು, ರೈಲ್ವೆ ನಿಲ್ದಾಣ, ಮೆಟ್ರೋ, ಏರ್‌ಪೋರ್ಟ್ ಸೇರಿದಂತೆ ಆಸ್ಪತ್ರೆಗಳಲ್ಲಿಯೂ ಲಸಿಕೆ ಹಾಕಲು ಕ್ರಮ ವಹಿಸಲಾಗಿದೆ. ಈ ಬಾರಿ 64,85,980 ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
32,571ಬೂತ್‌ಗಳು, 51,918 ತಂಡಗಳು, 11,0351ಲಸಿಕಾ ಕಾರ್ಯಕರ್ತರು, 7827 ಮೇಲ್ವಿಚಾರಕರು, 2481ಸಂಚಾರಿ ತಂಡ, 4300 ಟ್ರಾನ್ಸಿಲ್ ತಂಡ ರಚಿಸಿದ್ದು, ಇದಕ್ಕಾಗಿ 96 ಲಕ್ಷ ಡೋಸ್ ಪೋಲಿಯೋ ಲಸಿಕೆ, ಮಾರ್ಕರ್ ಪೆನ್ಸ್, ಪೋಸ್ಟರ್ಸ್, ಬ್ಯಾನರ್ಸ್, ಜಾಥಾ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
‘ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಸಂಪೂರ್ಣ ಯಶಸ್ಸು ಸಾಧಿಸಲು ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಸಮನ್ವತೆ ಅಗತ್ಯ. ಜತೆಗೆ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್, ರೋಟರಿ, ಐಎಂಎಗಳ ಸಹಕಾರವಿದೆ. ಈ ಹಿಂದೆ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿದ್ದರೂ, ಈ ಅಭಿಯಾನದಲ್ಲಿ ಮತ್ತೆ ಲಸಿಕೆ ಹಾಕಿಸುವುದು ಅವಶ್ಯಕ’
-ಶಿವಾನಂದ ಪಾಟೀಲ್, ಆರೋಗ್ಯ ಸಚಿವ







