ಮೋದಿಗೆ 56 ಇಂಚಿನ ಎದೆ ಇದ್ದರೆ ಸಾಲದು, ಜನರ ಸಮಸ್ಯೆಗೆ ಸ್ಪಂದಿಸುವ ಮನಸ್ಸೂ ಬೇಕು: ಸಿದ್ದರಾಮಯ್ಯ
ದ.ಕ.ಜಿಲ್ಲಾ ಕಾಂಗ್ರೆಸ್ ಪರಿವರ್ತನಾ ಯಾತ್ರೆಗೆ ಚಾಲನೆ

ಮಂಗಳೂರು,ಮಾ.6: ದೇಶ ಕಂಡ ಅತ್ಯಂತ್ರ ಭ್ರಷ್ಟ ಮತ್ತು ಮಹಾನ್ ಸುಳ್ಳುಗಾರನಾಗಿರುವ ಪ್ರಧಾನಿ ನರೇಂದ್ರ ಮೋದಿಯ ಬಣ್ಣದ ಮಾತಿಗೆ ಬಲಿ ಬೀಳಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಬುಧವಾರ ನಡೆದ ದ.ಕ.ಜಿಲ್ಲಾ ಕಾಂಗ್ರೆಸ್ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರದ ಮೋದಿ ನೇತೃತ್ವದ ಸರಕಾರವು ಎಲ್ಲಾ ಕ್ಷೇತ್ರಗಳಲ್ಲೂ ವೈಫಲ್ಯವನ್ನು ಕಂಡಿವೆ. ಕೊಟ್ಟ ಮಾತಿನಂತೆ ಮೋದಿ ಎಂದೂ ನಡೆದುಕೊಂಡಿಲ್ಲ. ಮೋದಿಗೆ 56 ಇಂಚಿನ ಎದೆ ಇದ್ದರೆ ಸಾಲದು, ಜನರ ಸಮಸ್ಯೆಗೆ ಸ್ಪಂದಿಸುವ ಮನಸ್ಸೂ ಬೇಕು. ಮೋದಿ ಆಡಳಿತದಿಂದ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು, ಬಡವರು, ಮಹಿಳೆಯರು ನೆಮ್ಮದಿಯಿಂದಿಲ್ಲ. ಆತಂಕದ ಬದುಕು ಸಾಗಿಸುತ್ತಿದ್ದಾರೆ. ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟು ನೀಚ ರಾಜಕಾರಣ ಮಾಡುತ್ತಿದ್ದಾರೆ. ಪುಲ್ವಾಮದಲ್ಲಿ ಯೋಧರ ಹುತಾತ್ಮವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ. ರಕ್ಷಣಾ ವೈಫಲ್ಯವನ್ನು ಪ್ರಶ್ನಿಸಿದರೆ ವಿಪಕ್ಷದ ಮೇಲೆ ಮೋದಿ ಗೂಬೆ ಕೂರಿಸಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು.
ರಫೇಲ್ ಖರೀದಿಯಲ್ಲಿ 39 ಸಾವಿರ ಕೋಟಿ ರೂಪಾಯಿಯ ಹಗರಣ ನಡೆದಿದೆ. ಅಂಬಾನಿಯಂತಹ ಬಂಡವಾಳಶಾಹಿಗಳಿಗೆ ನೆರವು ನೀಡುವ ಮೂಲಕ ಮೋದಿ ಭ್ರಷ್ಟಾಚಾರದ ಭಾಗಿಧಾರ್ ಆಗಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ನಳಿನ್‌ರನ್ನು ಸೋಲಿಸಿ: ಸಂಸದ ನಳಿನ್ ಉಪಯೋಗಕ್ಕೆ ಬಾರದ ವ್ಯಕ್ತಿ. ಅವರಿಗೆ ಬೆಂಕಿ ಹಚ್ಚಿ ಸಮಾಜವನ್ನು ಒಡೆಯಲು ಮಾತ್ರ ಗೊತ್ತು. ಸಾಮರಸ್ಯದಿಂದ ಬದುಕುವುದು ಹೇಗೆಂದು ತಿಳಿದಿಲ್ಲ. ಒಂದು ಕಾಲಕ್ಕೆ ಕರಾವಳಿಯು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಮತೀಯ ಭಾವನೆಯನ್ನು ಕೆರಳಿಸುವ ಮೂಲಕ ಬಿಜೆಪಿ ಇಲ್ಲಿ ತಳವೂರಿದೆ. ಅದನ್ನು ಕಿತ್ತೊಗೆಯುವ ಸಂಕಲ್ಪವನ್ನು ಈ ಕ್ಷಣದಿಂದಲೇ ಪ್ರತಿಯೊಬ್ಬ ಕಾರ್ಯಕರ್ತ ಮಾಡಬೇಕು. ಈ ಭಾಗದ ಅನಂತ ಕುಮಾರ್ ಹೆಗಡೆ, ಸದಾನಂದ ಗೌಡ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್‌ಗೆ ಮೋದಿಯ ಮುಂದೆ ನಿಂತು ಜನರ ಸಮಸ್ಯೆಯನ್ನು ಹೇಳುವ ಧೈರ್ಯವಿಲ್ಲ. ಹಾಗಾಗಿ ನಳಿನ್‌ರನ್ನು ಸೋಲಿಸಿ ತಕ್ಕ ಪಾಠ ಕಲಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.


















