ಬಿಜೆಪಿ ಸೇರಿದ ಉಮೇಶ್ ಜಾಧವ್

ಕಲಬುರಗಿ, ಮಾ.6: ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಡಾ.ಉಮೇಶ್ ಜಾಧವ್ ಬುಧವಾರ ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಪ್ರಧಾನಿ ನರೇಂದ್ರಮೋದಿ ಆಗಮನದ ಹಿನ್ನೆಲೆಯಲ್ಲಿ ಕಲಬುರಗಿಗೆ ಆಗಮಿಸಿದ್ದ ಮುಖಂಡರು, ಉಮೇಶ್ ಜಾಧವ್‌ರನ್ನು ಬಿಜೆಪಿ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಉಮೇಶ್ ಜಾಧವ್, ನರೇಂದ್ರಮೋದಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎನ್ನುವ ಕಾರಣಕ್ಕಾಗಿ ಸಂತೋಷದಿಂದ ಬಿಜೆಪಿ ಸೇರಿದ್ದೇನೆ. ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೊಸ ಇತಿಹಾಸ ರಚನೆ ಆಗಬೇಕು. ಹೀಗಾಗಿ ಜನತೆ ನನ್ನನ್ನು ಆಶೀರ್ವಾದ ಮಾಡಲಿ ಎಂದು ಅವರು ಮನವಿ ಮಾಡಿದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಓಡಲಾರದ ಕುದುರೆ. ಜಾಧವ್ ಸದ್ಯಕ್ಕೆ ಓಡುವ ಕುದುರೆ. ಖರ್ಗೆ ಅವರಿಗೆ ವಯಸ್ಸಾಗಿದೆ. ಜನತೆ ಮುಂದಿನ ದಿನಗಳಲ್ಲಿ ಜಾಧವ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





