ಕಾಂಗ್ರೆಸ್ ಸಂಸದರು ಇರುವ ಕ್ಷೇತ್ರಗಳನ್ನು ಬಿಡಲು ಸಾಧ್ಯವಿಲ್ಲ: ದೇವೇಗೌಡಗೆ ರಾಹುಲ್ ಗಾಂಧಿ ಸ್ಪಷ್ಟನೆ

ಹೊಸದಿಲ್ಲಿ/ಬೆಂಗಳೂರು,ಮಾ.6: ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಸೀಟು ಹಂಚಿಕೆ ಕುರಿತು ಹೊಸದಿಲ್ಲಿಯಲ್ಲಿ ಬುಧವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಮಾ.4ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಸೀಟು ಹಂಚಿಕೆ ಕುರಿತು ಯಾವುದೇ ತೀರ್ಮಾನವಾಗದ ಹಿನ್ನೆಲೆಯಲ್ಲಿ ಇಂದು ಹೊಸದಿಲ್ಲಿಯಲ್ಲಿರುವ ದೇವೇಗೌಡರ ನಿವಾಸದಲ್ಲಿ ರಾಹುಲ್‌ಗಾಂಧಿ ಚರ್ಚೆ ನಡೆಸಿದರು.
ಕಾಂಗ್ರೆಸ್ ಸಂಸದರಾದ ವೀರಪ್ಪಮೊಯ್ಲಿ ಪ್ರತಿನಿಧಿಸುವ ಚಿಕ್ಕಬಳ್ಳಾಪುರ, ಮುದ್ದಹನುಮೇಗೌಡ ಪ್ರತಿನಿಧಿಸುವ ತುಮಕೂರು ಹಾಗೂ ಕೆ.ಎಚ್.ಮುನಿಯಪ್ಪ ಪ್ರತಿನಿಧಿಸುವ ಕೋಲಾರ ಲೋಕಸಭಾ ಕ್ಷೇತ್ರಗಳೊಂದಿಗೆ, ಬೆಂಗಳೂರು ಉತ್ತರ ಹಾಗೂ ಮೈಸೂರು ಕ್ಷೇತ್ರಗಳಿಗಾಗಿ ಜೆಡಿಎಸ್ ಬೇಡಿಕೆ ಇಟ್ಟಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸಂಸದರು ಪ್ರತಿನಿಧಿಸುತ್ತಿರುವ 10 ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಸಾಧ್ಯವಿಲ್ಲ. ಈಗಾಗಲೇ ಮಂಡ್ಯ ಕ್ಷೇತ್ರವನ್ನು ತಮ್ಮ ಪಕ್ಷಕ್ಕೆ ನೀಡಲಾಗಿದೆ. ಮೈಸೂರು ಕ್ಷೇತ್ರವನ್ನು ನಿಮಗೆ ನೀಡಿ ಎಂದರೆ ಹೇಗೆ? ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಯಲಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನಲಾಗಿದೆ.
ರಾಜ್ಯಮಟ್ಟದ ನಾಯಕರ ನಡುವೆ ನಡೆದ ಮಾತುಕತೆ ವೇಳೆ ಜೆಡಿಎಸ್ 12 ಸ್ಥಾನಗಳಿಗೆ ಪಟ್ಟು ಹಿಡಿದಿತ್ತು. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ಗರಿಷ್ಠ 9 ಕ್ಷೇತ್ರಗಳನ್ನು ಬಿಟ್ಟುಕೊಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೇ, ಹಾಲಿ ಸಂಸದರು ಇರುವ ಕ್ಷೇತ್ರಗಳನ್ನು ಹೊರತುಪಡಿಸಿ, ಬೇರೆ ಕ್ಷೇತ್ರಗಳಲ್ಲಿ ಮಾತ್ರ ಸೀಟು ಹಂಚಿಕೆ ಕುರಿತು ಚರ್ಚೆ ನಡೆಸುವುದು ಸೂಕ್ತ ಎಂದು ಸಮನ್ವಯ ಸಮಿತಿಯಲ್ಲಿ ತೀರ್ಮಾನಿಸಲಾಗಿತ್ತು.
ರಾಹುಲ್‌ಗಾಂಧಿ ಹಾಗೂ ದೇವೇಗೌಡ ನಡುವೆ ನಡೆದ ಮಾತುಕತೆ ವೇಳೆ ಕ್ಷೇತ್ರಗಳ ಹಂಚಿಕೆ ಕುರಿತು ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ನಾಯಕರು ಮತ್ತೊಮ್ಮೆ ಚರ್ಚೆ ನಡೆಸಿ, ಒಮ್ಮತದ ತೀರ್ಮಾನ ಕೈಗೊಳ್ಳಿ. ಅದರಂತೆ, ಮುಂದಿನ ಹಂತದ ಚರ್ಚೆ ನಡೆಯಲಿ ಎಂದು ಉಭಯ ನಾಯಕರು ನಿರ್ಧರಿಸಿದ್ದಾರೆ.
ಎರಡು, ಮೂರು ದಿನಗಳ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಾನೀಶ್ ಅಲಿ ಸೀಟು ಹಂಚಿಕೆ ಕುರಿತ ಮಾತುಕತೆಯ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.







