ಸಿಡ್ನಿ: ಭಾರತ ಮೂಲದ ದಂತವೈದ್ಯೆಯ ಶವ ಸೂಟ್ ಕೇಸ್ ನಲ್ಲಿ ಪತ್ತೆ

ಸಿಡ್ನಿ, ಮಾ. 6: ರವಿವಾರದಿಂದ ನಾಪತ್ತೆಯಾಗಿದ್ದ ಸಿಡ್ನಿಯ ಭಾರತ ಮೂಲದ ದಂತವೈದ್ಯೆಯೊಬ್ಬರ ಶವ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ.
ಡಾ. ಪ್ರೀತಿ ರೆಡ್ಡಿ (32)ಯ ಚೂರಿಯಿಂದ ಇರಿಯಲ್ಪಟ್ಟಿರುವ ದೇಹವು ಅವರ ಕಾರ್ ನಲ್ಲಿರುವ ಸೂಟ್‌ಕೇಸ್ ನಲ್ಲಿ ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ. ಅವರ ದೇಹದಲ್ಲಿ ಚೂರಿ ಇರಿತದ ಹಲವಾರು ಗಾಯಗಳಿವೆ.
ಮಹಿಳೆಯ ಸಾವಿಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ನ್ಯೂ ಸೌತ್ ವೇಲ್ಸ್ ಪೊಲೀಸರು ಹೇಳಿದ್ದಾರೆ.
ಅವರು ಸಿಡ್ನಿಗೆ ಸಮೀಪದ ಬ್ಲೂ ಮೌಂಟನ್ಸ್‌ನಲ್ಲಿರುವ ‘ಗ್ಲೆನ್‌ಬ್ರೂಕ್ ಡೆಂಟಲ್ ಸರ್ಜರಿ’ಯಲ್ಲಿ ಕೆಲಸ ಮಾಡುತ್ತಿದ್ದರು.
ಪ್ರೀತಿ ಸಿಡ್ನಿಯ ಮಾರ್ಕೆಟ್ ರಸ್ತೆಯಲ್ಲಿರುವ ಹೊಟೇಲೊಂದರಲ್ಲಿ ರವಿವಾರ ತನ್ನ ಮಾಜಿ ಗೆಳೆಯನೊಂದಿಗೆ ತಂಗಿದ್ದರು ಎಂದು ಪೊಲೀಸರು ಹೇಳಿದರು. ಅವರ ಗೆಳೆಯನು ಸೋಮವಾರ ರಾತ್ರಿ ಟ್ಯಾಮ್‌ವರ್ತ್‌ನಲ್ಲಿರುವ ನ್ಯೂಇಂಗ್ಲೆಂಡ್ ಹೆದ್ದಾರಿಯಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ.
ಪ್ರೀತಿಯ ಗೆಳೆಯ ಸೋಮವಾರ ಅಪಘಾತದಲ್ಲಿ ಸಾಯುವ ಮೊದಲು ಪೊಲೀಸರು ಅವರೊಂದಿಗೂ ಮಾತನಾಡಿದ್ದರು ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ವಕ್ತಾರರೊಬ್ಬರು ಹೇಳಿದರು. ಅವರ ಗೆಳೆಯನೂ ದಂತವೈದ್ಯರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರೀತಿಯ ಮಾಜಿ ಗೆಳೆಯನ್ನು ಹರ್ಷ ನಾರ್ದೆ ಎಂಬುದಾಗಿ ಗುರುತಿಸಲಾಗಿದೆ. ಪ್ರೀತಿಯ ಶವ ಪತ್ತೆಯಾದ ಸುಮಾರು 340 ಕಿಲೋಮೀಟರ್ ಅಂತರದಲ್ಲಿ ಅವರ ಗೆಳೆಯನ ಕಾರು ಅಪಘಾತಕ್ಕೆ ಈಡಾಗಿದೆ. ಇದು ಉದ್ದೇಶಪೂರ್ವಕವಾಗಿ ನಡೆಸಲಾದ ಅಪಘಾತ ಎಂಬುದಾಗಿ ಭಾವಿಸಲಾಗಿದೆ.
‘‘ಡಾ. ಪ್ರೀತಿ ರೆಡ್ಡಿಯ ಕೊಲೆಯಲ್ಲಿ ಅವರ ಮಾಜಿ ಗೆಳೆಯ ಡಾ. ನಾರ್ದೆ ಪ್ರಧಾನ ಶಂಕಿತನಾಗಿದ್ದಾನೆ’’ ಎಂದು ‘ಆಸ್ಟ್ರೇಲಿಯ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಶನ್’ ವರದಿ ಮಾಡಿದೆ.







