ಕ್ಷಿಪಣಿ ಉಡ್ಡಯನ ಸ್ಥಳವನ್ನು ಮರುನಿರ್ಮಿಸುತ್ತಿರುವ ಕೊರಿಯ

ವಾಶಿಂಗ್ಟನ್, ಮಾ. 6: ಕಳೆದ ವರ್ಷ ಸಿಂಗಾಪುರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರೊಂದಿಗೆ ನಡೆದ ಮೊದಲ ಶೃಂಗ ಸಮ್ಮೇಳನದ ಬಳಿಕ ಕೆಡವಲು ಆರಂಭಿಸಿದ್ದ ಕ್ಷಿಪಣಿ ಉಡಾವಕ ಸ್ಥಳದ ಒಂದು ಭಾಗವನ್ನು ಉತ್ತರ ಕೊರಿಯ ಈಗ ಮರುನಿರ್ಮಿಸಿದೆ ಎಂದು ದಕ್ಷಿಣ ಕೊರಿಯದ ಯೊನ್‌ಹಾಪ್ ಸುದ್ದಿ ಸಂಸ್ಥೆ ಹಾಗೂ ಅಮೆರಿಕದ ಎರಡು ಸಂಸ್ಥೆಗಳು ಮಂಗಳವಾರ ವರದಿ ಮಾಡಿವೆ.
ಟಾಂಗ್‌ಚಂಗ್-ರಿ ಕ್ಷಿಪಣಿ ಉಡಾವಕ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿದೆ ಹಾಗೂ ಅಲ್ಲಿ ಮೇಲ್ಛಾವಣಿ ಮತ್ತು ಬಾಗಿಲೊಂದನ್ನು ಮತ್ತೆ ನಿರ್ಮಿಸಲಾಗುತ್ತಿದೆ ಎಂದು ದಕ್ಷಿಣ ಕೊರಿಯದ ಗುಪ್ತಚರ ಸಂಸ್ಥೆ ಸಂಸದರಿಗೆ ವಿವರಣೆ ನೀಡಿದೆ ಎಂದು ಯೊನ್‌ಹಾಪ್ ಹೇಳಿದೆ.
ಉಡಾವಕ ಸ್ಥಳದಲ್ಲಿ ಕಟ್ಟಡಗಳನ್ನು ಫೆಬ್ರವರಿ 16 ಮತ್ತು ಮಾರ್ಚ್ 2ರ ನಡುವಿನ ಅವಧಿಯಲ್ಲಿ ಪುನರ್ನಿರ್ಮಿಸಲಾಗುತ್ತಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ ಎಂದು ವಾಶಿಂಗ್ಟನ್‌ನಲ್ಲಿರುವ ಉತ್ತರ ಕೊರಿಯದ ಯೋಜನೆ ‘38 ನಾರ್ತ್’ ಹೇಳಿದೆ.
ಫೆಬ್ರವರಿ 27 ಮತ್ತು 28ರಂದು ವಿಯೆಟ್ನಾಮ್ ರಾಜಧಾನಿ ಹನೋಯಿಯಲ್ಲಿ ನಡೆದ ಎರಡನೇ ಶೃಂಗ ಸಮ್ಮೇಳನ ಯಾವುದೇ ಒಪ್ಪಂದಕ್ಕೆ ಬರಲು ವಿಫಲವಾದ ಬಳಿಕ ಈ ಬೆಳವಣಿಗೆ ನಡೆದಿದೆ.





