ರಾಜಕೀಯ ಒತ್ತಡದಿಂದ ಪರ್ಸಿನ್ ಮೀನುಗಾರಿಕೆ ವಿರುದ್ಧ ಸುಳ್ಳು ಆರೋಪ: ಪರ್ಸಿನ್ ಸಂಘ
ಮಲ್ಪೆ, ಮಾ.6: ಕೆಲವು ರಾಜಕೀಯ ವ್ಯಕ್ತಿಗಳ ಒತ್ತಡ ಮತ್ತು ಹಣ ಬಲದಿಂದ ಪರ್ಸಿನ್ ಮೀನುಗಾರರ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಬೆಳಕಿನ ಮೀನುಗಾರಿಕೆ ಅಕ್ರಮ ಅಲ್ಲ. ಪರ್ಸಿನ್ ಮೀನುಗಾರರು 45 ಎಂ.ಎಂ. ಗಾತ್ರದ ಬಲೆ ಬಳಸಿ ಮೀನು ಹಿಡಿಯುವುದರಿಂದ ಸಣ್ಣ ಮರಿ ಮೀನುಗಳು ನಾಶವಾಗುವುದಿಲ್ಲ ಎಂದು ಮಲ್ಪೆ ಪರ್ಸಿನ್ ಮೀನುಗಾರರ ಸಂಘ ತಿಳಿಸಿದೆ.
ಪರ್ಸಿನ್ ಬೋಟಿನ ಬೆಳಕು ಮೀನುಗಾರಿಕೆಯಿಂದ ಸಾವಿರಾರು ಮಂದಿ ಮೀನುಗಾರರು ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಪರ್ಸಿನ್ ಬೋಟಿನವರು ಸುಮಾರು 40ರಿಂದ 50ಲಕ್ಷ ಬ್ಯಾಂಕಿನಲ್ಲಿ ಸಾಲ ಮಾಡಿ ಬೋಟು ಬಲೆ ಖರೀದಿಸಿದ್ದಾರೆ. ಆದುದರಿಂದ ಉಚ್ಛ ನ್ಯಾಯಾಲಯವು ನೀಡಿದ ತೀರ್ಪುನ್ನು ಪುನರ್ ಪರಿಶೀಲನೆ ನಡೆಸಿ ಪರ್ಸಿನ್ ಮೀನುಗಾರರಿಗೆ ನ್ಯಾಯವಾದ ತೀರ್ಪನ್ನು ನೀಡಬೇಕು ಎಂದು ಸಂಘದ ಅಧ್ಯಕ್ಷ ಯಶೋಧರ ಅಮೀನ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಆಳಸಮುದ್ರ ಮೀನುಗಾರರು ದಿನದ 24ಗಂಟೆ ನಿರಂತರ ಟ್ರಾಲಿಂಗ್ ಮಾಡಿ 35ಎಂ.ಎಂ. ಗಾತ್ರದ ಬಲೆಯಿಂದ ಸಣ್ಣ ಗಾತ್ರದ ಮರಿಮೀನು ಹಿಡಿದು, ಮೀನಿನ ಮೊಟ್ಟೆಯನ್ನು ನಾಶ ಮಾಡುತ್ತಿದ್ದಾರೆ. ಆಳಸಮುದ್ರ ಮೀನುಗಾರರು ಹಿಡಿದು ತಂದ ಮೀನನ್ನೂ ಕೂಡ ಸಂಬಂಧಪಟ್ಟ ಇಲಾಖಾ ತಜ್ಞರು ಮೀನು ಖಾಲಿ ಮಾಡುವ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರೆ ನಿಜಾಂಶ ಬಯಲಾಗಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೀನುಗಾರಿಕೆ ಬಂದರಿನ ಗೇಟನ್ನು ಮನಬಂದಂತೆ ಬಂದ್‌ಗೊಳಿಸುವವರ ವಿರುದ್ದ ಸಂಬಂಧಿಸಿದ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ 3 ಬಾರಿ ಬಂದರಿನ ಮುಖ್ಯದ್ವಾರವನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗಿದೆ. ಇದರಿಂದ ಬಂದರಿನಲ್ಲಿರುವ ಎಲ್ಲ ವರ್ಗದ ಮೀನುಗಾರರಿಗೆ ತೊಂದರೆಯಾಗುತ್ತಿದೆ. ಇವರ ಮೇಲೆ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ.
'ಮೀನುಗಾರರ ಮಧ್ಯೆ ಕಲಹಕ್ಕೆ ಕಾರಣ'
ಮಲ್ಪೆ ಆಳ ಸಮುದ್ರದ ಮೀನುಗಾರರ ಸಂಘದ ಕೆಲವರು ಪರ್ಸಿನ್ ಮೀನುಗಾರಿಕೆಯನ್ನು ನಿಲ್ಲಿಸುವ ಹುನ್ನಾರ ನಡೆಸುತ್ತಿದ್ದು, ಸಂಬಂಧಪಟ್ಟ ಇಲಾಖೆ ಮತ್ತು ಮೀನುಗಾರ ಸಂಘದ ಅನುಮತಿ ಪಡೆಯದೆ ಸರ್ವಾಧಿಕಾರ ಧೋರಣೆ ಯಿಂದ ಮೀನುಗಾರರ ನಡುವೆ ಭಿನ್ನಾಬಿಪ್ರಾಯ ಮತ್ತು ಕಲಹಕ್ಕೆ ಕಾರಣರಾಗುತ್ತಿದ್ದಾರೆ ಎಂದು ಮಲ್ಪೆ ಪರ್ಸಿನ್ ಮೀನುಗಾರರ ಸಂಘ ಆರೋಪಿಸಿದೆ.
ಆಳಸಮುದ್ರ ಸಂಘದ ಅಧ್ಯಕ್ಷ ಕಿಶೋರ್ ಡಿ.ಸುವರ್ಣ, ದಯಾನಂದ ಕುಂದರ್, ಕರುಣಾಕರ ಸಾಲ್ಯಾನ್, ವಿಠಲ ಕರ್ಕೇರ ನಾಡದೋಣಿಯವರಿಗೆ ತಪ್ಪು ಮಾಹಿತಿ ನೀಡಿ, ಮಾತೃ ಸಂಘದ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಯಶೋಧರ ಅಮೀನ್ ತಿಳಿಸಿದ್ದಾರೆ.







