ರಫೇಲ್ ಒಪ್ಪಂದ: ಆಪ್ ನಾಯಕನ ಮನವಿ ಆಲಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಮಾ.6: ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ನ್ಯಾಯಾಂಗದ ಬಗ್ಗೆ ಕೆಲವು ಅತ್ಯಂತ ಅವಮಾನಕರ ಹೇಳಿಕೆಯನ್ನು ನೀಡಿದ್ದಾರೆ ಹಾಗಾಗಿ ರಫೇಲ್ ಯುದ್ಧವಿಮಾನ ಒಪ್ಪಂದದ ಬಗ್ಗೆ ನ್ಯಾಯಾಲಯ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಅವರು ಹಾಕಿರುವ ಮನವಿಯನ್ನು ಆಲಿಸುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಬುಧವಾರ ತಿಳಿಸಿದೆ.
ನ್ಯಾಯಾಂಗದ ಬಗ್ಗೆ ಮನವಿದಾರರು ನೀಡಿರುವ ಕೆಲವು ಹೇಳಿಕೆಗಳು ನಮ್ಮಬಳಿಯಿವೆ. ಅವು ಬಹಳ ಅವಮಾನಕಾರಿಯಾಗಿವೆ. ನಾವು ನಿಮ್ಮನ್ನು ಆಲಿಸುವುದಿಲ್ಲ ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಮತ್ತು ನ್ಯಾಯಾಧೀಶರಾದ ಎಸ್.ಕೆ ಕೌಲ್ ಹಾಗೂ ಕೆ.ಎಂ ಜೋಸೆಫ್ ಅವರ ಪೀಠ ತಿಳಿಸಿದೆ. ಆಪ್ ಸಂಸದ ನೀಡಿರುವ ಹೇಳಿಕೆಗೆ ಅವರು ನೀಡುವ ಸ್ಪಷ್ಟೀಕರಣದ ನಂತರ ಮುಂದಿನ ಕ್ರಮದ ಬಗ್ಗೆ ಆದೇಶ ಹೊರಡಿಸುವುದಾಗಿ ಸಿಂಗ್ ಪರ ವಕೀಲ ಸಂಜಯ್ ಹೆಗ್ಡೆಗೆ ನ್ಯಾಯಾಲಯ ತಿಳಿಸಿದೆ.
ಸಂಜಯ್ ಸಿಂಗ್ ನೀಡಿರುವ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡುವಂತೆ ಅವರ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿದಾಗ ನ್ಯಾಯವಾದಿ ಸಂಜಯ್ ಹೆಗ್ಡೆ ಈ ಬಗ್ಗೆ ತಿಳಿದಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮೊದಲು ನಿಮ್ಮ ಕಕ್ಷೀದಾರರ ಜೊತೆ ಈ ಕುರಿತು ಮಾತನಾಡಿ ಮತ್ತೆ ನ್ಯಾಯಾಲಯಕ್ಕೆ ಬನ್ನಿ ಎಂದು ವಕೀಲರಿಗೆ ತಾಕೀತು ಮಾಡಿದೆ.





