ಬುಲಂದ್‌ಶಹರ್ ಹಿಂಸಾಚಾರ: 38 ಆರೋಪಿಗಳ ದೇಶದ್ರೋಹದ ಆರೋಪ ಕೈಬಿಟ್ಟ ನ್ಯಾಯಾಲಯ

ಮೀರತ್, ಮಾ. 6: ಬುಲಂದ್‌ಶಹರ್ ಹಿಂಸಾಚಾರದ 38 ಆರೋಪಿಗಳ ವಿರುದ್ಧ ದೇಶದ್ರೋಹದ ಆಪಾದನೆಯನ್ನು ಬುಲಂದ್‌ಶಹರ್‌ನ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ನ್ಯಾಯಾಲಯ ಮಂಗಳವಾರ ಕೈಬಿಟ್ಟಿದೆ. ದೇಶದ್ರೋಹದ ಆರೋಪವನ್ನು ರಾಜ್ಯ ಸರಕಾರದ ಅನುಮೋದನೆ ಇಲ್ಲದೆ ಹೇರಲು ಸಾಧ್ಯವಿಲ್ಲದ ಕಾರಣ 38 ಆರೋಪಿಗಳ ಮೇಲಿನ ಆರೋಪವನ್ನು ಕೈಬಿಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಹಲವು ಗೋವುಗಳ ಕಳೇಬರ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಯಾನದ ಛಿಂಗ್ರವಥಿ ಗ್ರಾಮದಲ್ಲಿ ಹಿಂಸಾಚಾರ ಉದ್ಭವಿಸಿತ್ತು. ಈ ಹಿಂಸಾಚಾರದಲ್ಲಿ ಓರ್ವ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಇನ್ನೋರ್ವ ಸ್ಥಳೀಯ ಯುವಕ ಮೃತಪಟ್ಟಿದ್ದರು. ಆರೋಪಿಗಳ ವಿರುದ್ಧ ಮಾಡಲಾದ ದೇಶದ್ರೋಹದ ಆರೋಪಕ್ಕೆ ರಾಜ್ಯ ಸರಕಾರದ ಅನುಮೋದನೆ ಪಡೆಯುವಂತೆ ನ್ಯಾಯಾಲಯ ತನಿಖಾ ತಂಡಕ್ಕೆ ಸೂಚಿಸಿತ್ತು. ಪೊಲೀಸ್ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರನ್ನು ಹತ್ಯೆಗೈದ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ತಂಡ ಶನಿವಾರ ಆರೋಪ ಪಟ್ಟಿ ಸಲ್ಲಿಸಿತ್ತು.
ಬಜರಂಗ ದಳದ ನಾಯಕ ಯೋಗೇಶ್ ರಾಜ್, ಬಿಜೆಪಿ ನಾಯಕ ಶಿಖಾರ್ ಅಗರ್‌ವಾಲ್ ಹಾಗೂ ವಿಎಚ್‌ಪಿಯ ಉಪೇಂದ್ರ ರಾಘವ್ ಅವರು ಸೇರಿದಂತೆ 30 ಜನರ ವಿರುದ್ಧ ಹಿಂಸಾಚಾರಕ್ಕೆ ಉತ್ತೇಜನ, ಬೆಂಕಿ ಹಚ್ಚಿರುವುದು ಹಾಗೂ ಇತರ ಆರೋಪಗಳನ್ನು ಹೊರಿಸಲಾಗಿತ್ತು. ದೇಶದ್ರೋಹದ ಆರೋಪದ ಕುರಿತು ಅನುಮೋದನೆ ಕೋರಿ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಇದಕ್ಕೆ ಕಾಲಾವಕಾಶ ಬೇಕಾಗಬಹುದು ಎಂದು ಸ್ಯಾನದ ಸರ್ಕಲ್ ಆಫೀಸರ್ ರಾಘವೇಂದ್ರ ಮಿಶ್ರಾ ಹೇಳಿದ್ದಾರೆ.
ಪ್ರತಿಕ್ರಿಯೆ ಸಿಕ್ಕಿದ ಕೂಡಲೇ ನಾವು ನ್ಯಾಯಾಲಯದ ಮುಂದೆ ರಾಜ್ಯ ಸರಕಾರದ ಪ್ರತಿಕ್ರಿಯೆಯನ್ನು ಸಲ್ಲಿಸಲಿದ್ದೇವೆ ಎಂದು ಮಿಶ್ರಾ ತಿಳಿಸಿದ್ದಾರೆ. ಹಿಂಸಾಚಾರ ಘಟನೆಯ 38 ಆರೋಪಿಗಳ ವಿರುದ್ಧ ವಿಶೇಷ ತನಿಖಾ ತಂಡ ಶನಿವಾರ ನ್ಯಾಯಾಲಯಕ್ಕೆ 103 ಪುಟಗಳ ಆರೋಪ ಪಟ್ಟಿ ಸಲ್ಲಿಸಿತ್ತು.







