ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣ: ಸಿಬಿಐಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ಹೈಕೋರ್ಟ್

ಬೆಂಗಳೂರು, ಮಾ.6: ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ, ಸಿಬಿಐ ಹಾಗೂ ಇತರೆ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿ ರಾಕೇಶ್ ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ. ಆರೋಪಿ ಮುನಿರತ್ನಗೆ ಬೆಂಗಳೂರು ಸೆಂಟ್ರಲ್ ವಿಭಾಗದ ಡಿಸಿಪಿ ಅವರು ನೋಟಿಸ್ ಜಾರಿಗೊಳಿಸಬೇಕು. ಹಾಗೊಂದು ಬಾರಿ ನೋಟಿಸ್ ಜಾರಿಗೊಳಿಸದಿದ್ದರೆ, ಡಿಸಿಪಿ ಅವರೆ ಕೋರ್ಟ್‌ಗೆ ಖುದ್ದು ಹಾಜರಾಗಿ ವಿವರಣೆ ನೀಡಬೇಕೆಂದು ಹೇಳಿದ ನ್ಯಾಯಪೀಠ, ಸಿಬಿಐ ಹಾಗೂ ಇತರೆ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಧ್ಯಂತರ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರೂ ಅದರಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್ ಇವರಿಗೆ ಹೇಗೆ ಸಿಕ್ಕಿತು. 10 ತಿಂಗಳು ಆದರೂ ಅಂತಿಮ ದೋಷಾರೋಪಣಾ ಪಟ್ಟಿಯನ್ನು ಯಾಕೆ ಸಲ್ಲಿಸಿಲ್ಲ ಎಂಬುದರ ಬಗ್ಗೆ ಯಾವುದೇ ನೀವು ನೀಡಿಲ್ಲ ಎಂದ ನ್ಯಾಯಪೀಠ, ಮುನಿರತ್ನ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ, ವಿಚಾರಣೆಯನ್ನು ಮಾ.11ಕ್ಕೆ ಮುಂದೂಡಿತು. ಎಸ್‌ಎಲ್‌ವಿ ಪಾರ್ಕ್ ವ್ಯೆ ಅಪಾರ್ಟ್‌ಮೆಂಟ್‌ನ ಪ್ಲಾಟ್ ಒಂದರಲ್ಲಿ 9746 ಮತದಾರರ ಗುರುತಿನ ಚೀಟಿಯನ್ನು ಚುನಾವಣಾ ವಿಚಕ್ಷಣ ದಳವು ಪತ್ತೆ ಮಾಡಿತ್ತು.







