ಪ್ರಥಮ ಟಿ20: ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಗೆ ಜಯ
ಬೈಸ್ಟೊ ಸಾಹಸ

ಸೈಂಟ್ ಲೂಸಿಯ, ಮಾ.6: ಟಿ20 ತಜ್ಞ ಆಟಗಾರರ ಅನುಪಸ್ಥಿತಿಯಲ್ಲಿ ಜಾನಿ ಬೈಸ್ಟೊ ತೋರಿದ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ್ನು 4 ವಿಕೆಟ್‌ಗಳಿಂದ ಮಣಿಸಿ ಶುಭಾರಂಭ ಮಾಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಇಲ್ಲಿಯ ಡಾರೆನ್ ಸ್ಯಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಪ್ರವಾಸಿ ಇಂಗ್ಲೆಂಡ್ ಎದುರಾಳಿಯನ್ನು ಬ್ಯಾಟಿಂಗ್‌ಗೆ ಇಳಿಸಿತು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ ವಿಂಡೀಸ್ ಬ್ಯಾಟಿಂಗ್‌ಗೆ ನಿಕೋಲಾಸ್ ಪೂರನ್ ಅವರು ಸಮಯೋಚಿತ ಅರ್ಧಶತಕದ (58, 37 ಎಸೆತ, 3 ಬೌಂಡರಿ, 4 ಸಿಕ್ಸರ್) ಮೂಲಕ ಬಲ ನೀಡಿದರು. ಡಾರೆನ್ ಬ್ರಾವೊ (28, 1 ಬೌಂಡರಿ 2 ಸಿಕ್ಸರ್) ಹಾಗೂ ಪೂರನ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 64 ರನ್ ಜಮೆ ಮಾಡಿದರು. ಬಾರ್ಬಡೋಸ್ ಸಂಜಾತ ಇಂಗ್ಲೆಂಡ್ ಬೌಲರ್ ಕ್ರಿಸ್ ಜೋರ್ಡಾನ್(16ಕ್ಕೆ 2) ಅವರು ಬ್ರಾವೊ ವಿಕೆಟ್ ಪಡೆಯುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು.
ಕ್ರಿಸ್ ಗೇಲ್ (15, 2 ಸಿಕ್ಸರ್) ಹಾಗೂ ಶಿಮ್ರಿನ್ ಹೆಟ್ಮೆಯರ್ (14, 1 ಬೌಂಡರಿ, 1 ಸಿಕ್ಸರ್ )ಅಲ್ಪ ಕಾಣಿಕೆ ನೀಡಿದರು. ಅಂತಿಮವಾಗಿ ವಿಂಡೀಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 160 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪಂದ್ಯದಲ್ಲಿ ಇಂಗ್ಲೆಂಡ್ ಪರ ಟಾಮ್ ಕರ್ರನ್(36ಕ್ಕೆ 4) ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿದರು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಅರ್ಧಶತಕ (68, 40 ಎಸೆತ, 9 ಬೌಂಡರಿ 2 ಸಿಕ್ಸರ್) ಗಳಿಸಿದ ಬೈಸ್ಟೊ ಹಾಗೂ ಜೊ ಡೆನ್ಲಿ (30, 4 ಬೌಂಡರಿ) ಆಸರೆಯಾದರು. ಸ್ಯಾಮ್ ಬಿಲ್ಲಿಂಗ್ಸ್ (18) ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು. ಅಂತಿಮವಾಗಿ 18.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ಗುರಿ ತಲುಪಿತು. ವಿಂಡೀಸ್ ಪರ ಶೆಲ್ಡ್‌ನ್ ಕಾಟ್ರೆಲ್ ಬೌಲಿಂಗ್‌ನಲ್ಲಿ (29ಕ್ಕೆ 3) ಮಿಂಚಿದರು.







