ಸಿಂಧುಗೆ ಪ್ರಥಮ ಸುತ್ತಿನಲ್ಲೇ ಸೋಲಿನ ಆಘಾತ

ಬರ್ಮಿಂಗ್‌ಹ್ಯಾಮ್, ಮಾ.6: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಬುಧವಾರ ನಡೆದ ಪ್ರಥಮ ಸುತ್ತಿನ ಪಂದ್ಯದಲ್ಲೇ ಸೋಲಿನ ಆಘಾತಕ್ಕೆ ಒಳಗಾಗಿದ್ದಾರೆ. ಟೂರ್ನಿಯಲ್ಲಿ 5ನೇ ಶ್ರೇಯಾಂಕ ಪಡೆದಿದ್ದ ಸಿಂಧು, ಮಹಿಳಾ ಸಿಂಗಲ್ಸ್‌ನಲ್ಲಿ ಕೊರಿಯದ ಎದುರಾಳಿ ಸಂಗ್ ಜಿ ಹ್ಯೂನ್ ವಿರುದ್ಧ 16-21, 22-20, 18-21 ಗೇಮ್‌ಗಳಿಂದ ಮಣಿದು ಭಾರೀ ನಿರಾಸೆ ಉಂಟುಮಾಡಿದರು. ಪ್ರಬಲ ಹೋರಾಟ ಕಂಡುಬಂದ ಪಂದ್ಯವು ಸುಮಾರು 1 ತಾಸು 20 ನಿಮಿಷಗಳ ಕಾಲ ನಡೆಯಿತು.
ಪ್ರಥಮ ಗೇಮ್‌ನ್ನು ಕಳೆದುಕೊಂಡ ಬಳಿಕ ಎರಡನೇ ಗೇಮ್‌ನಲ್ಲಿ ಭರ್ಜರಿ ವಾಪಸಾತಿ ಮಾಡಿದರು ಹೈದರಾಬಾದ್ ಬೆಡಗಿ ಸಿಂಧು. ಎರಡನೇ ಗೇಮ್‌ನಲ್ಲಿ ವಿಶ್ವ ನಂ.6 ಆಟಗಾರ್ತಿ ಮೂರು ಮ್ಯಾಚ್‌ಪಾಯಿಂಟ್‌ಗಳನ್ನು ಉಳಿಸಿಕೊಂಡು 22-20ರಿಂದ ಗೇಮ್‌ನ್ನು ವಶಪಡಿಸಿಕೊಂಡರು.
ಪ್ರಥಮ ಎರಡು ಗೇಮ್‌ನಂತೆಯೇ ವಿಶ್ವ ನಂ.10 ಆಟಗಾರ್ತಿ ಸಂಗ್ ಮೂರನೇ ಗೇಮ್‌ನಲ್ಲೂ ಪಾರಮ್ಯ ಮೆರೆದೆರು. ಮೂರನೇ ಗೇಮ್‌ನಲ್ಲಿ 20-13ರಿಂದ ಭಾರೀ ಮುನ್ನಡೆ ಪಡೆದಿದ್ದ ಸಂಗ್, ಆ ಬಳಿಕ ಸಿಂಧು ಆ ಮುನ್ನಡೆಯನ್ನು 18-20ಕ್ಕೆ ತಗ್ಗಿಸಿದಾಗ ಅಲ್ಪ ವಿಚಲಿತರಾದರು. ಆದರೆ ಕೊರಿಯ ಆಟಗಾರ್ತಿ 21-18ರಿಂದ ಗೇಮ್‌ನ್ನು ವಶಪಡಿಸಿಕೊಳ್ಳುವುದನ್ನು ಸಿಂಧುಗೆ ತಡೆಯಲಾಗಲಿಲ್ಲ.
ಸಿಂಧು ವಿರುದ್ಧ ಗೆಲುವು ಕಂಡ ಸಂಗ್ ಜಿ ತಮ್ಮ ಮುಂದಿನ ಪಂದ್ಯದಲ್ಲಿ ಹಾಂಕಾಂಗ್‌ನ ಚೆಂಗ್ ಗಾನ್ ಯಿ ಅವರನ್ನು ಎದುರಿಸಲಿದ್ದಾರೆ.
►ಮಹಿಳಾ ಡಬಲ್ಸ್‌ನಲ್ಲಿ ಮೇಘನಾ- ಪೂರ್ವಿಶಾ ಪರಾಭವ

ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲಿ ಭಾರತದ ಮೇಘನಾ ಜಕ್ಕಂಪುಡಿ ಹಾಗೂ ಪೂರ್ವಿಶಾ ಎಸ್. ರಾಮ್ ಜೋಡಿಯು ಅತ್ಯಂತ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ರಶ್ಯದ ಏಕಟೆರಿನಾ ಬೊಲೊಟೊವಾ ಹಾಗೂ ಅಲಿನಾ ಡೆವೆಲ್ಟೊವಾ ಜೋಡಿಗೆ 21-18, 12-21, 12-21ರಿಂದ ಮಣಿಯಿತು. ಮೊದಲ ಗೇಮ್‌ನಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಭಾರತೀಯ ಆಟಗಾರ್ತಿಯರಿಗೆ ಅದೇ ಪ್ರದರ್ಶನವನ್ನು ಮುಂದುವರಿಸಲು ಆಗಲಿಲ್ಲ.
►ಸಾಯಿ ಪ್ರಣೀತ್ ಎರಡನೇ ಸುತ್ತಿಗೆ

ಪ್ರಥಮ ಸುತ್ತಿನ ಪಂದ್ಯದಲ್ಲಿ ತಮ್ಮದೇ ದೇಶದ ಎಚ್.ಎಸ್.ಪ್ರಣಯ್ ಅವರನ್ನು ಸೋಲಿಸಿದ ಭಾರತದ ಸಾಯಿ ಪ್ರಣೀತ್ ಇಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
52 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-19, 21-19 ನೇರ ಗೇಮ್‌ಗಳಿಂದ ಪ್ರಣಯ್‌ರನ್ನು ಮಣಿಸಿದ ಪ್ರಣೀತ್ ದ್ವಿತೀಯ ಸುತ್ತಿಗೆ ಕಾಲಿಟ್ಟರು. ತಮ್ಮ ಮುಂದಿನ ಪಂದ್ಯದಲ್ಲಿ ಅವರು ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್ ಆ್ಯಂಗಸ್ ಅವರ ಸವಾಲನ್ನು ಎದುರಿಸಲಿದ್ದಾರೆ. ಮತ್ತೊಂದೆಡೆ ಆ್ಯಂಗಸ್ ಅವರು ಇಂಡೋನೇಶ್ಯದ ಅಂತೋನಿ ಸಿನಿಸುಕ ಗಿಂಟಿಂಗ್ ಅವರನ್ನು 21-18, 13-21, 21-11ರಿಂದ ಮಣಿಸಿದರು.
ಈ ಗೆಲುವಿನೊಂದಿಗೆ ಪ್ರಣೀತ್ ಅವರು ಪ್ರಣಯ್ ಅವರೊಂದಿಗಿನ ಹೆಡ್ ಟು ಹೆಡ್ ಗೆಲುವಿನ ದಾಖಲೆಯನ್ನು 2-2 ರಿಂದ ಸಮಗೊಳಿಸಿದರು. 2013 ಹಾಗೂ 2011ರಲ್ಲಿ ಎರಡು ಪಂದ್ಯಗಳಲ್ಲಿ ಪ್ರಣೀತ್ ಅವರು ಪ್ರಣಯ್‌ಗೆ ಸೋತಿದ್ದರು. ಆದರೆ ಬುಧವಾರ ಉತ್ತಮ ಪ್ರದರ್ಶನದ ಮೂಲಕ ಸುಧಾರಿಸಿಕೊಂಡರು.







