ರಫೇಲ್ ದಾಖಲೆಗಳನ್ನು ನೀಡಿದ ರಹಸ್ಯ ಮೂಲಗಳ ಸಂರಕ್ಷಣೆಗೆ ನಾವು ಬದ್ಧ
‘ದ ಹಿಂದೂ’ ಚೇರ್ ಮೆನ್ ಎನ್. ರಾಮ್

ಹೊಸದಿಲ್ಲಿ, ಮಾ. 6: ಭಾರತ ಹಾಗೂ ಫ್ರಾನ್ಸ್ ನಡುವಿನ ರಫೇಲ್ ಜೆಟ್ ಒಪ್ಪಂದದ ಕುರಿತ ದಾಖಲೆಗಳನ್ನು ಪಡೆದಿರುವ ಮೂಲವನ್ನು ಸಂರಕ್ಷಿಸಲು ಪತ್ರಿಕೆ ಬದ್ಧವಾಗಿದೆ ಎಂದು ‘ಹಿಂದೂ’ ಪ್ರಕಾಶಕ ಸಮೂಹದ ಅಧ್ಯಕ್ಷ ಎನ್. ರಾಮ್ ಬುಧವಾರ ಹೇಳಿದ್ದಾರೆ.
“ರಫೇಲ್ ಒಪ್ಪಂದದ ಕುರಿತ ದಾಖಲೆಗಳು ಹಾಗೂ ಅದನ್ನು ಆಧರಿಸಿ ನಾನು ಬರೆದ ಲೇಖನ ರಫೇಲ್ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ನುಡಿಯುತ್ತವೆ” ಎಂದು ಅವರು ಹೇಳಿದ್ದಾರೆ. ರಫೇಲ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ನೀಡಿದ ತೀರ್ಪಿನ ಕುರಿತು ಸಲ್ಲಿಸಲಾಗಿದ್ದ ಮರು ಪರಿಶೀಲನಾ ಮನವಿ ರಕ್ಷಣಾ ಸಚಿವಾಲಯದಿಂದ ಕಳವುಗೈಯಲಾಗಿದ್ದ ದಾಖಲೆಗಳನ್ನು ಆಧಾರವಾಗಿ ಹೊಂದಿತ್ತು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಕಳವಾದ ದಾಖಲೆಗಳ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಕೇಂದ್ರ ಸರಕಾರ ಪ್ರತಿಪಾದಿಸಿದೆ.
ಸರಕಾರಿ ರಹಸ್ಯ ಕಾಯ್ದೆ ಅಡಿಯಲ್ಲಿ ‘ಹಿಂದೂ’ ತಪ್ಪೆಸಗಿದೆ ಎಂದು ಕೇಂದ್ರ ಆರೋಪಿಸಿದೆ. ರಫೇಲ್ ಒಪ್ಪಂದದ ಕುರಿತು ಸಿಬಿಐ ತನಿಖೆಯ ಅಗತ್ಯವನ್ನು ಸುಪ್ರೀಂ ಕೋರ್ಟ್ 2018 ಡಿಸೆಂಬರ್‌ನಲ್ಲಿ ತಿರಸ್ಕರಿಸಿತ್ತು. ಕೇಂದ್ರ ಸರಕಾರದ ವಿರುದ್ಧವಾಗಿ ರಫೇಲ್ ಒಪ್ಪಂದದ ಭ್ರಷ್ಟಾಚಾರದ ಬಗ್ಗೆ ‘ಹಿಂದೂ’ ಬಹಿರಂಗಗೊಳಿಸಿತ್ತು. ಪತ್ರಿಕೆ ಸಂಗ್ರಹಿಸಿದ ಸರಕಾರದ ದಾಖಲೆಯನ್ನು ಈ ವರದಿ ಆಧರಿಸಿತ್ತು. ‘‘ನೀವು ಇದನ್ನು ಕಳವುಗೈದ ದಾಖಲೆಗಳು ಎಂದು ಕರೆಯಬಹುದು. ಆದರೆ, ನಮಗೆ ಏನೂ ತೊಂದರೆ ಇಲ್ಲ’’ ಎಂದು ಎಂದು ಎನ್. ರಾಮ್ ಹೇಳಿದ್ದಾರೆ.
‘‘ನಾವು ಈ ದಾಖಲೆಗಳನ್ನು ರಹಸ್ಯ ಮೂಲಗಳಿಂದ ಪಡೆದುಕೊಂಡಿದ್ದೇವೆ. ಈ ಮೂಲವನ್ನು ಸಂರಕ್ಷಿಸಲು ನಾವು ಬದ್ಧರಾಗಿದ್ದೇವೆ. ಈ ಮೂಲದ ಮೂಲಕ ಯಾರೊಬ್ಬರೂ ನಮ್ಮಿಂದ ಮಾಹಿತಿ ಪಡೆಯಲು ಸಾಧ್ಯವಿಲ್ಲ. ಆದರೆ, ಈ ದಾಖಲೆಗಳು ಹಾಗೂ ಲೇಖನ ರಫೇಲ್ ಒಪ್ಪಂದದ ಭ್ರಷ್ಟಾಚಾರದ ಕುರಿತು ಸಾಕ್ಷಿ ನುಡಿಯುತ್ತದೆ’’ ಎಂದು ಎನ್. ರಾಮ್ ಹೇಳಿದ್ದಾರೆ.







