ವೇಳಾಪಟ್ಟಿ ಬದಲಿಸಲು ಎಐಎಫ್‌ಎಫ್ ನಿರ್ಧಾರ
ರಿಯಲ್ ಕಾಶ್ಮೀರ-ಮಿನರ್ವಾ ಫುಟ್ಬಾಲ್ ಪಂದ್ಯ
ಹೊಸದಿಲ್ಲಿ, ಮಾ.6: ಕಾಶ್ಮೀರದ ಶ್ರೀನಗರದಲ್ಲಿ ಫೆ.18ರಂದು ನಡೆಯಬೇಕಿದ್ದ ರಿಯಲ್ ಕಾಶ್ಮೀರ ಹಾಗೂ ಮಿನರ್ವಾ ಕ್ಲಬ್‌ಗಳ ಮಧ್ಯದ ಐ-ಲೀಗ್ ಟೂರ್ನಿಯ ಪಂದ್ಯದ ವೇಳಾಪಟ್ಟಿ ಮರುಹೊಂದಿಸಲು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ(ಎಐಎಫ್‌ಎಫ್) ನಿರ್ಧರಿಸಿದೆ.
ಪುಲ್ವಾಮ ಉಗ್ರ ದಾಳಿಯ ನಂತರ ಕಾಶ್ಮೀರದಲ್ಲಿ ಉಂಟಾದ ಪ್ರಕ್ಷುಬ್ಧ ಪರಿಸ್ಥಿತಿಯ ಕಾರಣ ಭದ್ರತೆಯ ನೆಪವೊಡ್ಡಿ ಮಿನರ್ವಾ ತಂಡ ಶ್ರೀನಗರದಲ್ಲಿ ನಡೆಯಬೇಕಿದ್ದ ಪಂದ್ಯದಲ್ಲಿ ಪಾಲ್ಗೊಳ್ಳಲು ನಿರಾಕರಿಸಿತ್ತು.
‘‘ಈ ಪಂದ್ಯಕ್ಕೆ ಸದ್ಯ ಮರು ವೇಳಾಪಟ್ಟಿ ಹೊಂದಿಸಲು ಎಐಎಫ್‌ಎಫ್‌ನ ತುರ್ತು ಸಮಿತಿ ನಿರ್ಧರಿಸಿದ್ದು, ದಿನಾಂಕ ಹಾಗೂ ಸ್ಥಳ ಇನ್ನಷ್ಟೇ ನಿರ್ಧಾರವಾಗಬೇಕಿದೆ’’ ಎಂದು ಐ-ಲೀಗ್‌ನ ಕಾರ್ಯನಿರ್ವಹಣಾಧಿಕಾರಿ ಸುನಂದೊ ಧರ್ ಹೇಳಿದ್ದಾರೆ.
ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್, ಐವರು ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯನ್ನು ಎಐಎಫ್‌ಎಫ್‌ನ ತುರ್ತು ಸಮಿತಿ ಹೊಂದಿದೆ. ಎಐಎಫ್‌ಎಫ್ ಹಾಗೂ ಪಂದ್ಯದಲ್ಲಿ ಭಾಗವಹಿಸಲಿರುವ ತಂಡಗಳಿಗೆ ಅನುಕೂಲವಾಗುವ ದಿನಾಂಕ ಹಾಗೂ ಸ್ಥಳದಲ್ಲಿ ನಡೆಸಲಾಗುವುದು ಎಂದು ಈ ಸಮಿತಿಯ ಹೇಳಿಕೆ ತಿಳಿಸಿದೆ.





