3 ದೇಶಗಳಿಂದ ಯೂರೋಪಿಯನ್ ಟಿ20 ಲೀಗ್
ಎಡಿನ್‌ಬರ್ಗ್,ಮಾ.6: ಐರೋಪ್ಯ ದೇಶಗಳಾದ ಸ್ಕಾಟ್‌ಲ್ಯಾಂಡ್, ನೆದರ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ಮಂಡಳಿಗಳು ಸಭೆ ನಡೆಸಿ ಯೂರೋಪಿಯನ್ ಟಿ20 ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸುವ ನಿರ್ಧಾರಕ್ಕೆ ಬಂದಿವೆ. ಈ ಪಂದ್ಯಾವಳಿಯು ಈ ವರ್ಷದ ಆಗಸ್ಟ್ 30ರಿಂದ ಸೆಪ್ಟಂಬರ್ 22ರವರೆಗೆ ನಡೆಯಲಿದೆ ಎಂದು ಮಂಡಳಿಗಳು ನೀಡಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಜೊತೆ ಸಮಾಲೋಚನೆ ನಡೆಸಿದ ನಂತರ ಈ ಪಂದ್ಯಾವಳಿಯನ್ನು ಯೋಜಿಸಲಾಗಿದೆ.
ಪಂದ್ಯಾವಳಿಯ ಹೆಸರು ಮತ್ತು ಸ್ಥಳ ಎಪ್ರಿಲ್‌ನಲ್ಲಿ ಘೋಷಣೆ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮೂರೂ ದೇಶಗಳ ತಲಾ ಎರಡು ತಂಡಗಳಂತೆ ಆರು ಫ್ರಾಂಚೈಸಿಗಳು ಮೂವತ್ತು ಗ್ರೂಪ್ ಪಂದ್ಯಗಳನ್ನು ಆಡಲಿದ್ದು ನಂತರ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಸೆಣಸಲಿವೆ. ಮೂರು ದೇಶಗಳ ಟಿ20 ಪಂದ್ಯಾವಳಿಯಿಂದ ಸ್ಕಾಟಿಶ್ ಕ್ರಿಕೆಟ್ ಅಭಿವೃದ್ಧಿ ಹೊಂದಲು ನೆರವಾಗಲಿದೆ ಎಂದು ಕ್ರಿಕೆಟ್ ಸ್ಕಾಟ್‌ಲ್ಯಾಂಡ್ ಮುಖ್ಯ ಕಾರ್ಯನಿರ್ವಾಹಕ ಮಾಲ್ಕಮ್ ಕ್ಯಾನನ್ ತಿಳಿಸಿದ್ದಾರೆ.
ಪ್ರತಿ ತಂಡದಲ್ಲೂ ಕನಿಷ್ಠ ಒಂಬತ್ತು ಮಂದಿ ದೇಶೀಯ ಆಟಗಾರರಿರಬೇಕು ಮತ್ತು ಪ್ರತಿ ತಂಡದಲ್ಲಿ ಗರಿಷ್ಠ ಏಳು ವಿದೇಶಿ ಆಟಗಾರರಿಗೆ ಅವಕಾಶವಿದೆ. ಮೈದಾನದಲ್ಲಿ ಆಡಲಿಳಿಯುವ ತಂಡದಲ್ಲಿ ಆರು ದೇಶೀಯ ಆಟಗಾರರಿರುವುದು ಕಡ್ಡಾಯವಾಗಿದೆ.





