ಜಮ್ಮುವಿನ ಬಸ್ ನಿಲ್ದಾಣದಲ್ಲಿ ಗ್ರೆನೇಡ್ ದಾಳಿ; 1 ಸಾವು , 32 ಮಂದಿಗೆ ಗಾಯ

ಶ್ರೀನಗರ, ಮಾ.7: ಜಮ್ಮುವಿನ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಓರ್ವ ಯುವಕ ಮೃತಪಟ್ಟು 32 ಮಂದಿ ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ.
ಉತ್ತರಾಖಂಡ್ ನ ಹರಿದ್ವಾರದ 17 ಹರೆಯದ ಮುಹಮ್ಮದ್ ಶರೀಫ್ ಮೃತಪಟ್ಟ ಯುವಕ. ಉಗ್ರರ ದಾಳಿಯಿಂದ ಗಾಯಗೊಂಡ 33 ಮಂದಿಯನ್ನುಜಮ್ಮುವಿನ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಶರೀಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಘಟನಾ ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದಾರೆ . ಜಮ್ಮುವಿನಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಹೈ ಆಲರ್ಟ್ ಘೋಷಿಸಲಾಗಿದೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಬಸ್ ನಿಲ್ದಾಣದಲ್ಲಿ ಭಯೋತ್ಪಾದಕರಿಂದ ದಾಳಿ ನಡೆದಿದೆ. ಇಂದು ನಡೆದ ದಾಳಿಯಲ್ಲಿ ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರಲ್ಲಿ ಕಾಶ್ಮೀರದ 11 ಮಂದಿ, ಬಿಹಾರದ ಇಬ್ಬರು, ಛತ್ತೀಸ್ ಗಡ ಮತ್ತು ಹರ್ಯಾಣದ ತಲಾ ಒಬ್ಬರು ಇದ್ದಾರೆಂದು ಪೊಲೀಸರು ತಿಳಿಸಿದ್ದಾರೆ
ಘಟನಾ ಸ್ಥಳಕ್ಕೆ ಶ್ವಾನ ದಳ, ವಿಧಿವಿಜ್ಞಾನ ತಜ್ಞರು ಆಗಮಿಸಿದ್ದಾರೆ. ದಾಳಿ ನಡೆಸಿದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.







