ಜೊತೆಯಾಗಿ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಸರಕಾರಿ ಕೆಲಸ ಗಿಟ್ಟಿಸಿಕೊಂಡ ತಾಯಿ-ಮಗಳು

ಚೆನ್ನೈ, ಮಾ.7: ಅಪರೂಪದ ವಿದ್ಯಮಾನವೊಂದರಲ್ಲಿ ತಮಿಳುನಾಡಿನ ಥೇನಿ ಸಮೀಪದ ಪುಟ್ಟ ಗ್ರಾಮದ ತಾಯಿ-ಮಗಳು ಜತೆಯಾಗಿಯೇ ತಮಿಳುನಾಡು ಲೋಕಸೇವಾ ಆಯೋಗ ಪರೀಕ್ಷೆಗೆ ಹಾಜರಾಗಿ ತೇರ್ಗಡೆಗೊಂಡು, ಇದೀಗ ರಾಜ್ಯ ಸರಕಾರಿ ಉದ್ಯೋಗವನ್ನೂ ಪಡೆದಿದ್ದಾರೆ. 47 ವರ್ಷದ ಶಾಂತಿ ಲಕ್ಷ್ಮಿ ಹಾಗೂ ಆಕೆಯ ಪುತ್ರಿ ತೇನ್ಮೊಳಿಯ ಸಂತೋಷಕ್ಕೆ ಈಗ ಪಾರವೇ ಇಲ್ಲದಂತಾಗಿದೆ.
ಶಾಂತಿ ಲಕ್ಷ್ಮಿ 15 ವರ್ಷದವಳಿರುವಾಗಲೇ ಹೆತ್ತವರು ಮದುವೆ ಮಾಡಿಸಿದ್ದರು. ಆಗಷ್ಟೇ 10ನೇ ತರಗತಿ ಪೂರ್ತಿಗೊಳಿಸಿದ್ದ ಆಕೆ ತನ್ನ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಸಾಕಷ್ಟು ಶ್ರಮ ಪಟ್ಟಿದ್ದಳು. ಆಕೆಯ ಗಂಡ ರೈತನಾಗಿದ್ದ. ಮದುವೆಯಾದ ನಂತರವೂ ಹೆಚ್ಚಿನ ಶಿಕ್ಷಣ ಪಡೆಯಬೇಕೆಂಬ ಆಸೆ ಆಕೆಯ ಮನಸ್ಸಿನ ಮೂಲೆಯಲ್ಲಿತ್ತು.
ಮದುವೆಯಾಗಿ ಆರು ವರ್ಷಗಳ ನಂತರ 12ನೇ ತರಗತಿ ಪೂರ್ತಿಗೊಳಿಸಿದ ಶಾಂತಿ ಲಕ್ಷ್ಮಿ ಮುಂದೆ ಟೈಪ್ ರೈಟಿಂಗ್ ಜೂನಿಯರ್ ಮತ್ತು ಸೀನಿಯರ್ ಹಂತ ತೇರ್ಗಡೆಯಾಗಿದ್ದರು. ನಂತರ 2010ರಲ್ಲಿ ಬಿಎ (ತಮಿಳು) ಪದವಿ ಪಡೆದಿದ್ದರು. ಈತನ್ಮಧ್ಯೆ ಆಕೆಯ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮೂವರು ಹೆಣ್ಣು ಮಕ್ಕಳ ತಾಯಿಯಾಗಿರುವ ಶಾಂತಿ ಲಕ್ಷಿ ಸದ್ಯ ತೇನ್ಮೊಳಿ ಜತೆ ತಮಿಳಿನಲ್ಲಿ ಸ್ನಾತ್ತಕೋತ್ತರ ಪದವಿಗಾಗಿ ಮಧುರೈ ಕಾಮರಾಜ್ ವಿವಿಯ ಕರೆಸ್ಪಾಂಡೆನ್ಸ್ ಕೋರ್ಸ್ ಸೇರಿದ್ದಾರೆ.
ಈ ಹಿಂದೆ ಆಕೆ ಮೂರು ಬಾರಿ ತಮಿಳುನಾಡು ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರೂ ಖಾಲಿ ಹುದ್ದೆಯಿಲ್ಲವೆಂದು ಆಕೆಗೆ ಹೇಳಲಾಗಿತ್ತು.
2015ರಲ್ಲಿ ತೇನ್ಮೊಳಿ ಕೂಡ ಲೋಕಸೇವಾ ಆಯೋಗದ ಪರೀಕ್ಷೆಗೆ ತಯಾರಿ ನಡೆಸಿ ಕೋಚಿಂಗ್ ಗೆ ಹೊಗಲಾರಂಭಿಸಿದ್ದರು. ಸಮಯ ಸಿಕ್ಕಾಗಲೆಲ್ಲಾ ಶಾಂತಿ ಲಕ್ಷ್ಮ ಕೂಡ ಅಲ್ಲಿಗೆ ಹೋಗುತ್ತಿದ್ದರು. ರಾತ್ರಿ ತಾಯಿ ಮಗಳಿಬ್ಬರೂ ಜತೆಯಾಗಿಯೇ ಅಧ್ಯಯನ ನಡೆಸುತ್ತಿದ್ದರು.
ಇದೀಗ ತಮಿಳುನಾಡು ಆರೋಗ್ಯ ಇಲಾಖೆಯಲ್ಲಿ ಶಾಂತಿ ಲಕ್ಷ್ಮಿಗೆ ಉದ್ಯೋಗ ದೊರಕಿದ್ದರೆ, ತೇನ್ಮೊಳಿ ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆಯಲ್ಲಿ ಪೋಸ್ಟಿಂಗ್ ಗಾಗಿ ಕಾದಿದ್ದಾರೆ.







