ವಾರಾಂತ್ಯದಲ್ಲಿ ಅಥವಾ ಮುಂದಿನ ಮಂಗಳವಾರ ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟ ?

ಹೊಸದಿಲ್ಲಿ, ಮಾ.7: ಮುಂದಿನ ಲೋಕಸಭಾ ಚುನಾವಣೆ ಎಪ್ರಿಲ್ –ಮೇ ತಿಂಗಳಲ್ಲಿ 7-8 ಹಂತಗಳಲ್ಲಿ ನಡೆಯಲಿದ್ದು, ಶೀಘ್ರದಲ್ಲೇ ಕೇಂದ್ರ ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಪ್ರಕಟಿಸಲಿದೆ.
ಈಗಿನ ಲೋಕಸಭೆಯ ಅವಧಿ ಜೂನ್ 3ರಂದು ಕೊನೆಗೊಳ್ಳಲಿದ್ದು, ಈ ವಾರಾಂತ್ಯಕ್ಕೆ ಅಥವಾ ಮುಂದಿನ ಮಂಗಳವಾರ ಚುನಾವಣಾ ದಿನಾಂಕಗಳು ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಚುನಾವಣಾ ಆಯೋಗವು ಪ್ರಥಮ ಹಂತದ ಚುನಾವಣೆಯ ಅಧಿಸೂಚನೆಯನ್ನು ಮಾರ್ಚ್ ಅಂತ್ಯದೊಳಗೆ ಹೊರಡಿಸಲಿದೆ. ಎಪ್ರಿಲ್ ಆರಂಭದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಲೋಕಸಭೆಯ 543 ಕ್ಷೇತ್ರಗಳ ಚುನಾವಣೆಗೆ 10 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಆಯೋಗವು ತಯಾರಿ ನಡೆಸಿದೆ.
ಲೋಕಸಭೆಯ ಜೊತೆಗೆ ಆಂದ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ತಯಾರಿ ನಡೆಸಿದೆ ಎಂದು ತಿಳಿದು ಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆಯು ವಿಸರ್ಜನೆಗೊಂಡಿದ್ದು, ಲೋಕಸಭೆಯ ಜೊತೆಗೆ ಅಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಎಲ್ಲವೂ ಸರಿಯಾದರೆ ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ ನಡೆಯಲಿದೆ.
ಸಿಕ್ಕಿಂ ವಿಧಾನಸಭೆಯ ಅವಧಿ 2019 ಮೇ 27 ಕ್ಕೆ, ಆಂಧ್ರ ಪ್ರದೇಶದಲ್ಲಿ ಜೂ.18, ಒಡಿಶಾದಲ್ಲಿ ಜೂನ್ 11 ಮತ್ತು ಅರುಣಾಚಲ ವಿಧಾನಸಭೆಯ ಅವಧಿ ಜೂನ್ 1ರಂದು ಕೊನೆಗೊಳ್ಳಲಿದೆ.
ಚುನಾವಣಾ ಆಯೋಗವು 2004ರಲ್ಲಿ ಲೋಕಸಭೆ ಚುನಾವಣೆಯ ನಾಲ್ಕು ಹಂತದ ಮತದಾನಕ್ಕೆ 29ರಂದು ದಿನಾಂಕವನ್ನು ಪ್ರಕಟಿಸಿತ್ತು. ಎಪ್ರಿಲ್ 20ರಂದು ಮೊದಲ ಹಂತದ ಮತ್ತು . ಮೇ 10ರಂದು ಕೊನೆಯ ಹಂತದ ಮತದಾನ ನಡೆದಿದೆ.
2009ರಲ್ಲಿ ಮಾರ್ಚ್ 2ರಂದು ಐದು ಹಂತಗಳ ಚುನಾವಣೆಯ ದಿನಾಂಕ ಪ್ರಕಟಗೊಂಡಿತ್ತು. ಎಪ್ರಿಲ್ 16ರಂದು ಮೊದಲ ಹಂತದ ಹಾಗೂ ಮೇ 13 ರಂದು ಕೊನೆಯ ಹಂತದ ಮತದಾನ ನಡೆದಿದೆ.
2014ರಲ್ಲಿ ಮಾರ್ಚ್ 5ರಂದು ಚುನಾವಣಾ ಆಯೋಗವು 9 ಹಂತಗಳ ಮತದಾನದ ದಿನಾಂಕವನ್ನು ಪ್ರಕಟಿಸಿತ್ತು. ಎಪ್ರಿಲ್ 7ರಂದು ಚುನಾವಣೆಗೆ ಮೊದಲ ಹಂತದ ಮತ್ತು ಮೇ 12ರಂದು ಕೊನೆಯ ಹಂತದ ಮತದಾನ ನಡೆದು, ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಭಾರೀ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.







