ಮೈತ್ರಿ ಸರಕಾರ ಜನರಿಗೆ ನೀಡಿದ್ದ ಭರವಸೆ ಈಡೇರಿಸಿಲ್ಲ: ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು, ಮಾ. 7: ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು 9 ತಿಂಗಳು ಕಳೆದರೂ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಸರಕಾರ ನಿದ್ದೆ ಮಾಡುತ್ತಿದ್ದು, ಅಧಿಕಾರಿಗಳು ಗೊರಕೆ ಹೊಡೆಯುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.
ಗುರುವಾರ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಾಲಮನ್ನಾ ಯೋಜನೆ ಸಂಪೂರ್ಣವಾಗಿ ವಿಫಲವಾಗಿದ್ದು, ಸರಕಾರ ಕೇವಲ ಬೊಗಳೆ ಬಿಡುವುದರಲ್ಲಿ ಕಾಲಹರಣ ಮಾಡುತ್ತಿದೆ. ಕೇಂದ್ರ ಸರಕಾರ ನೀಡಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಇವರಿಗೆ ಆಗುತ್ತಿಲ್ಲ ಎಂದರು.
ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯಲ್ಲೆ ಕಾಲಹರಣ ಮಾಡುತ್ತಿರುವ ರಾಜ್ಯ ಸರಕಾರಕ್ಕೆ ಪ್ರಧಾನಿ ಮೋದಿ, ಕೇಂದ್ರ ಸರಕಾರವನ್ನು ಟೀಕಿಸುವ ನೈತಿಕತೆ ಇಲ್ಲ ಎಂದ ಅವರು, ಉದ್ಯೋಗ ಖಾತ್ರಿ, ಪ್ರಕೃತಿ ವಿಕೋಪ ಸೇರಿದಂತೆ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡಿದ ಹಣವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಸಿಗಬೇಕಾದ ಎಲ್ಲ ರೀತಿಯ ಸವಲತ್ತುಗಳನ್ನು ಕೇಂದ್ರ ನೀಡಿದೆ. ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ರಾಜ್ಯಕ್ಕೆ 71ಸಾವಿರ ಕೋಟಿ ರೂ.ಅನುದಾನ ಸಿಕ್ಕಿತ್ತು. ಆದರೆ, ಮೋದಿ ಅವಧಿಯಲ್ಲಿ ರಾಜ್ಯಕ್ಕೆ 2.19 ಲಕ್ಷ ಕೋಟಿ ರೂ.ಅನುದಾನ ನೀಡಿದೆ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಕುಡಿಯುವ ನೀರು, ರಸ್ತೆಗಳ ನಿರ್ಮಾಣ, ಶೌಚಾಲಯ ಸೇರಿದಂತೆ ಯಾವುದೇ ಯೋಜನೆಗಳಲ್ಲೂ ಪಕ್ಷಪಾತ ಮಾಡಿಲ್ಲ. ನೆನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಅನುದಾನ ನೀಡಲಾಗಿದೆ. ಯಾವ ಕಾರಣಕ್ಕಾಗಿ ರಾಜ್ಯ ಸರಕಾರ ಕೇಂದ್ರವನ್ನು ಟೀಕೆ ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದರು.
ವರಿಷ್ಠರ ನಿರ್ಧಾರ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದ್ದು, ಕೆಲವರು ನನ್ನ ವಿರುದ್ಧ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ಆದರೆ, ಯಾರಿಗೆ ಟಿಕೆಟ್ ನೀಡಬೇಕೆಂಬುದು ವರಿಷ್ಠರ ನಿರ್ಧಾರಕ್ಕೆ ಬಿಟ್ಟದ್ದು. ನನಗೆ ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದರು.
ಪ್ರಧಾನಿ ಮೋದಿ ದೇಶದ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ಭ್ರಷ್ಟಾಚಾರ ಮುಕ್ತ ಆಡಳಿತ, ದೇಶದ ಸ್ವಾವಲಂಬನೆ, ಅಭಿವೃದ್ಧಿ, ರಕ್ಷಣೆ ನಮ್ಮ ಧ್ಯೇಯವಾಗಿತ್ತು. ಅದರಂತೆ ಮೋದಿ ಅವರು ಒಂದೂ ಕಪ್ಪುಚುಕ್ಕೆ ಇಲ್ಲದೆ ಉತ್ತಮ ಆಡಳಿತ ನೀಡಿದ್ದಾರೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ. ರಾಜ್ಯದಲ್ಲಿಯೂ ಬಿಜೆಪಿ ಕನಿಷ್ಟ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಪಕ್ಷದ ವಕ್ತಾರ ಆನಂದ್ ಹಾಜರಿದ್ದರು.
‘ಕಾವಿ-ತಿಲಕ ಇಟ್ಟವರನ್ನು ನೋಡಿದರೆ ನನಗೆ ಭಯವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟಿಪ್ಪು ಭಕ್ತರ ಓಲೈಕೆಗಾಗಿ ಹೇಳಿದ್ದು, ಪ್ರತಿಯೊಬ್ಬರು ತಿಲಕವಿಟ್ಟು ಕೊಳ್ಳುತ್ತಾರೆ. ಸಿದ್ದರಾಮಯ್ಯನವರು ಇಷ್ಟು ನೀಚ ರಾಜಕಾರಣಕ್ಕೆ ಇಳಿದಿರುವುದು ಸರಿಯಲ್ಲ’
-ಶೋಭಾ ಕರಂದ್ಲಾಜೆ, ಸಂಸದೆ







