ತಾಯಿ ಹತ್ಯೆ ಆರೋಪಿಗೆ ಜೀವಾವದಿ ಶಿಕ್ಷೆ

ಮೈಸೂರು,ಮಾ.7: ತಾಯಿಯನ್ನೇ ಹತ್ಯೆಗೈದಿದ್ದ ಆರೋಪಿಗೆ ನಗರದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಗರದ ಸುಣ್ಣದಕೇರಿ 9ನೇ ಕ್ರಾಸ್ ನಿವಾಸಿ ಸುಂದರಂ (57) ಎಂಬಾತನೇ ತನ್ನ ತಾಯಿ ಗೋವಿಂದಮ್ಮ ಎಂಬುವವರನ್ನು ಹತ್ಯೆಗೈದು ಜೀವಾವಧಿ ಶಿಕ್ಷೆಗೊಳಗಾದವನು.
ಪತಿಯನ್ನು ಕಳೆದುಕೊಂಡಿದ್ದ ಗೋವಿಂದಮ್ಮ ಅವರು ತನ್ನ ಎರಡನೇ ಮಗ ಸುಂದರಂ ಜೊತೆಗೆ ವಾಸವಿದ್ದರು. ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಆತ ತಾಯಿಯನ್ನು ನೋಡಿಕೊಳ್ಳುವ ನೆಪವೊಡ್ಡಿ ಕೆಲಸವನ್ನು ತೊರೆದಿದ್ದ. ಪ್ರತೀ ದಿನ ತಾಯಿಯಿಂದ ಹಣ ಪಡೆದು ಜೀವನ ಮಾಡುತ್ತಿದ್ದ. ಗೋವಿಂದಮ್ಮ ಅವರ ಮೊದಲ ಮಗ ಸುಬ್ಬಣ್ಣ ಎಂಬವರು ಆಗಾಗ್ಗೆ ತಾಯಿಯನ್ನು ನೋಡಲು ಮನೆಗೆ ಬರುತ್ತಿದ್ದರು. ಇದು ಆತನಿಗೆ ಸಹಿಸಲಾಗುತ್ತಿರಲಿಲ್ಲ. ಅಣ್ಣನಿಗೆ ತಾಯಿ ಹಣ ನೀಡುತ್ತಿದ್ದಾರೆ ಎಂಬ ಅನುಮಾನ ಆತನಿಗಿತ್ತು. ಈ ಸಂಬಂಧ ತಾಯಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ.
2017 ಜೂನ್ 30 ರಂದು ಗೋವಿಂದಮ್ಮ ಶೌಚಾಲಯಕ್ಕೆ ತೆರಳಿ ವಾಪಾಸ್ ಬರುವಾಗ ತಾಯಿಯೊಂದಿಗೆ ಜಗಳ ತೆಗೆದಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಇದರಿಂದ ರೊಚ್ಚಿಗೆದ್ದ ಆತ ಅಡುಗೆ ಮನೆಗೆ ಹೋದವನೇ ಅಲ್ಲಿದ್ದ ಕಬ್ಬಿಣದ ದೋಸೆ ತವಾದೊಂದಿಗೆ ಬಂದು ತಾಯಿಯ ತಲೆ ಮೇಲೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಗೋವಿಂದಮ್ಮ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಈ ಸಂಬಂಧ ಕೃಷ್ಣರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ ಸ್ಪೆಕ್ಟರ್ ಪ್ರಕಾಶ್ ಅವರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಚಂದ್ರಶೇಖರ್ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸುಂದರಂಗೆ ಜೀವಾವಧಿ ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಹಂತಪ್ಪ ವಾದ ಮಂಡಿಸಿದ್ದರು.







