ಅಂತರ್‌ರಾಜ್ಯ ಸರಗಳ್ಳರ ಬಂಧನ: 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು, ಮಾ.7: ಕಳವು ಮಾಡಿದ ಚಿನ್ನದ ಸರಗಳನ್ನು ಸ್ನೇಹಿತನ ಮೂಲಕ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ್‌ರಾಜ್ಯ ಸರಗಳ್ಳರು ಸೇರಿ ಮೂವರು ಆರೋಪಿಗಳನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತಿಕೆರೆಯ ಗೋಕುಲ್ ರಸ್ತೆಯ ಅರುಣ್ ಕುಮಾರ್ ಅಲಿಯಾಸ್ ಅರುಳ್(33), ಸರ್ಜಾಪುರದ ಕಾರ್ತಿಕ್(30) ಸರಗಳ್ಳರಾಗಿದ್ದಾರೆ. ಹಾಗೂ ಇವರಿಂದ ಚಿನ್ನದ ಸರಗಳನ್ನು ಪಡೆದು ಮಾರಾಟ ಮಾಡುತ್ತಿದ್ದ ದೊಡ್ಡಬೊಮ್ಮಸಂದ್ರದ ಜಯಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 1ಕೆಜಿ 220 ಗ್ರಾಮ್ ಚಿನ್ನದ ಸರಗಳು, 2 ಪಲ್ಸರ್ ಬೈಕ್‌ಗಳೂ ಸೇರಿ 40 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವ ಮೂಲಕ 37 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಬಂಧಿತ ಆರೋಪಿಗಳು ತಮಿಳುನಾಡು ಮೂಲದವರಾಗಿದ್ದು, ಇಬ್ಬರು ಸೇರಿ ಪಲ್ಸರ್ ಬೈಕ್‌ಗಳನ್ನು ಕಳವು ಮಾಡಿ, ಬೆಂಗಳೂರು ದಕ್ಷಿಣ ವಿಭಾಗದ ಹಲವು ಠಾಣಾ ವ್ಯಾಪ್ತಿಯಲ್ಲಿ ಸಂಚರಿಸುತ್ತ ಆ ಒಂಟಿ ಮಹಿಳೆಯರನ್ನು ಗುರುತಿಸಿ ಸರಗಳ್ಳತನ ಮಾಡುತ್ತಿದ್ದರು. ಈ ಬಗ್ಗೆ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.







