‘ಗ್ಯಾಂಗ್‌ಸ್ಟರ್’ ಮಾದರಿಯಲ್ಲಿ ಕೆಲಸ ಮಾಡುತ್ತಿರುವ ಸೌದಿ ಯುವರಾಜ: ಅಮೆರಿಕ ಸಂಸದರು

ವಾಶಿಂಗ್ಟನ್, ಮಾ. 7: ಸೌದಿ ಅರೇಬಿಯವು ಸರಣಿ ದುಷ್ಕೃತ್ಯಗಳನ್ನು ನಡೆಸಿದೆ ಹಾಗೂ ಅದರ ಯುವರಾಜ ‘ಗ್ಯಾಂಗ್‌ಸ್ಟರ್’ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಅಮೆರಿಕದ ಸಂಸದರು ಬುಧವಾರ ಆರೋಪಿಸಿದ್ದಾರೆ.
ಸೌದಿ ಅರೇಬಿಯಕ್ಕೆ ಅಮೆರಿಕದ ರಾಯಭಾರಿಯಾಗಿ ನಿವೃತ್ತ ಜನರಲ್ ಜಾನ್ ಅಬಿಝಾಯಿದ್‌ರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ನೇಮಕವನ್ನು ಖಚಿತಪಡಿಸಲು ನಡೆದ ಸೆನೆಟ್ ಸಭೆಯಲ್ಲಿ ಈ ಆರೋಪಗಳು ಬಂದವು.
ಯೆಮನ್ ಆಂತರಿಕ ಯುದ್ಧದಲ್ಲಿ ಸೌದಿ ಅರೇಬಿಯದ ನಡವಳಿಕೆ, ಕಠೋರ ರಾಜತಾಂತ್ರಿಕತೆ ಮತ್ತು ಮಾನವಹಕ್ಕುಗಳ ಉಲ್ಲಂಘನೆಗಳನ್ನು ಅಧ್ಯಕ್ಷ ಟ್ರಂಪ್‌ರ ರಿಪಬ್ಲಿಕನ್ ಪಕ್ಷದ ಸಂಸದರು ಹಾಗೂ ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರು ತೀವ್ರವಾಗಿ ಟೀಕಿಸಿದರು.
ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು ಓರ್ವ ಅಮೆರಿಕ ನಾಗರಿಕನಿಗೆ ನೀಡಲಾಗಿರುವ ಹಿಂಸೆ ಮತ್ತು ಸೌದಿ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಬಗ್ಗೆಯೂ ಅವರು ಕೆಂಡ ಕಾರಿದರು.
ಖಶೋಗಿ ಹತ್ಯೆಯ ಹೊಣೆಗಾರರ ಮೇಲೆ ಉತ್ತರದಾಯಿತ್ವ ನಿಗದಿಪಡಿಸಬೇಕು ಎಂದು ನಿಯೋಜಿತ ಸೌದಿ ರಾಯಭಾರಿ ಜಾನ್ ಅಬಿಝಾಯಿದ್ ಕರೆ ನೀಡಿದರು ಹಾಗೂ ಮಾನವಹಕ್ಕುಗಳಿಗೆ ಬೆಂಬಲ ನೀಡಿದರು. ಆದರೆ, ವಾಶಿಂಗ್ಟನ್-ರಿಯಾದ್ ನಡುವಿನ ಸಂಬಂಧದ ಮಹತ್ವಕ್ಕೆ ಪದೇ ಪದೇ ಒತ್ತು ನೀಡಿದರು.
ಎರಡು ದೇಶಗಳ ನಡುವಿನ ಉದ್ವಿಗ್ನತೆಯಲ್ಲಿ ಹೆಚ್ಚಳವಾಗಿದ್ದರೂ, 2017 ಜನವರಿಯಲ್ಲಿ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಂದಿನಿಂದ ಅಮೆರಿಕ ಸೌದಿ ಅರೇಬಿಯದಲ್ಲಿ ತನ್ನ ರಾಯಭಾರಿಯನ್ನು ಹೊಂದಿಲ್ಲ.







