ಮಹಾದಾಯಿ ನದಿ ನೀರು ಬಳಕೆ: ಗೋವಾ ರೂಪಿಸುತ್ತಿರುವ ಯೋಜನೆಗೆ ಬಸವರಾಜ ಹೊರಟ್ಟಿ ವಿರೋಧ

ಬೆಂಗಳೂರು, ಮಾ.7: ಅಂತರ್‌ರಾಜ್ಯ ನದಿಯಾದ ಮಹಾದಾಯಿ ನದಿ ನೀರು ಬಳಕೆ ಕುರಿತು ನ್ಯಾಯಾಧೀಕರಣವು ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದ್ದು, ಅದು ಭಾರತದ ಗೆಜೆಟ್‌ನಲ್ಲಿ ಪ್ರಕಟವಾಗಬೇಕಿದೆ. ನಮ್ಮ ರಾಜ್ಯ ಸರಕಾರವು ನ್ಯಾಯಾಧೀಕರಣದ ತೀರ್ಪನ್ನು ಪ್ರಶ್ನಿಸಿದೆ. ಅದೇ ರೀತಿ ಗೋವಾ ರಾಜ್ಯವು ಮೇಲ್ಮನವಿ ಸಲ್ಲಿಸಿದೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದಿರುವ ಅವರು, ಪರಿಸ್ಥಿತಿ ಹೀಗಿರುವಾಗ ಗೋವಾ ರಾಜ್ಯವು ಪೋಲಾಗುತ್ತಿರುವ ಮಹಾದಾಯಿ ನದಿ ನೀರನ್ನು ಬಳಸಲು ಯೋಜನೆ ಆರಂಭಿಸಲು ಸಿದ್ಧತೆ ನಡೆಸಿದೆ ಎಂದು ಆ ರಾಜ್ಯದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ವಿಶ್ವಜಿತ್ ರಾಣೆ, ಈ ಯೋಜನೆಯ ಅನುಷ್ಠಾನಕ್ಕೆ 100 ಕೋಟಿ ರೂ.ಖರ್ಚು ಮಾಡಿ, 110 ಎಂಎಲ್‌ಡಿ ನೀರು ಸಂಸ್ಕರಣಾ ಸಾಮರ್ಥ್ಯದ ಘಟಕ ಸ್ಥಾಪಿಸಿ, ಬಹುತೇಕ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಲಾಗುವುದೆಂದು ತಿಳಿಸುತ್ತಾ, ಗಾಂಜೆ ಎಂಬಲ್ಲಿ ಒಂದು ದೊಡ್ಡ ಬಾಂದಾರೆ ನಿರ್ಮಿಸಿ, ಅಲ್ಲಿಂದ ಖಾಂಡೆಪಾರ್ ನದಿಗೆ ಹರಿಬಿಟ್ಟು, ಅಲ್ಲಿಂದ ಓಪಾ ನೀರಿನ ಸಂಸ್ಕರಣಾ ಘಟಕದ ಮೂಲಕ ಗೋವಾದ ವಿವಿಧೆಡೆ ಕುಡಿಯುವ ನೀರು ಪೂರೈಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.
ಆದರೆ, ನಮ್ಮ ರಾಜ್ಯ ಮಹಾದಾಯಿ ನದಿ ನೀರನ್ನು ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿಕೊಳ್ಳಲು ಯಾವುದೇ ಪೂರ್ವ ತಯಾರಿಯನ್ನು ಮಾಡಿಕೊಂಡಿಲ್ಲ. ಯೋಜನೆಗಳನ್ನು ರೂಪಿಸಿ ಅನುದಾನ ಒದಗಿಸಿಲ್ಲವೆಂಬುದು ನನ್ನ ಭಾವನೆ ಎಂದು ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಆದುದರಿಂದ, ಕೂಡಲೇ ಮಹಾದಾಯಿ ನ್ಯಾಯಾಧೀಕರಣದ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುವುದರೊಂದಿಗೆ ನಮ್ಮ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಕಷ್ಟು ಅನುದಾನವನ್ನು ಕಾಯ್ದಿರಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಮಹಾದಾಯಿ ನದಿ ನೀರು ಬಳಕೆ ಉತ್ತರ ಕರ್ನಾಟಕದ ಜನತೆಯ ಜೀವನ್ಮರಣದ ಪ್ರಶ್ನೆಯಾಗಿದ್ದು, ಕೂಡಲೆ ಸರಕಾರ ಗೋವಾ ರಾಜ್ಯದ ನಡೆಯನ್ನು ಸೂಕ್ತ ಪ್ರಾಧಿಕಾರ ಅಥವಾ ನ್ಯಾಯಾಲಯದಲ್ಲಿ ವಿರೋಧಿಸಬೇಕು. ಈ ಕುರಿತು ತಜ್ಞರೊಂದಿಗೆ ಚರ್ಚಿಸಿ ರಾಜ್ಯದ ಹಿತಾಸಕ್ತಿಗೆ ಮಾರಕವಾಗುವ ಗೋವಾ ರಾಜ್ಯದ ನಿಲುವುಗಳಿಗೆ ಪ್ರತಿಭಟನೆ ವ್ಯಕ್ತಪಡಿಸುವ ಅಗತ್ಯವಿದೆ ಎಂದು ಬಸವರಾಜ ಹೊರಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.







