ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷರ ನೇಮಕಕ್ಕೆ ಆಗ್ರಹಿಸಿ ಧರಣಿ

ಬೆಂಗಳೂರು, ಮಾ.7: ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನಾ ಧರಣಿ ನಡೆಸಿದರು.
ನಗರದ ಪುರಭವನದಿಂದ ಮೌರ್ಯ ವೃತ್ತದವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿದ ವಿವಿಧ ದಲಿತ ಸಂಘಟನೆಗಳ ನೂರಾರು ಕಾರ್ಯಕರ್ತರು, ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡದೇ ನಿರ್ಲಕ್ಷ ವಹಿಸುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಸಂಚಾಲಕ ಡಾ.ಎಂ.ವೆಂಕಟಸ್ವಾಮಿ, ದಲಿತರಿಗೆ ಅನ್ಯಾಯವಾದಾಗ ಆಯೋಗದ ಬಳಿ ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ಬರುತ್ತಾರೆ. ಆದರೆ, ಅದನ್ನು ನಡೆಸುವವರೇ ಇಲ್ಲದಿದ್ದರೆ, ಯಾರ ಬಳಿ ನೋವನ್ನು ಹೇಳಿಕೊಳ್ಳಬೇಕು. ಆದುದರಿಂದಾಗಿ ಕೂಡಲೇ ಆಯೋಗವನ್ನು ನಡೆಸುವ ಅಧ್ಯಕ್ಷರೊಬ್ಬರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಆಯಾ ಜಾತಿ, ಜನವರ್ಗಗಳ ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಸರಕಾರದ ಅನುದಾನದ ಹಣವನ್ನು ಸರಿಸಮಾನವಾಗಿ ಹಂಚುವ ಕ್ರಿಯಾಯೋಜನೆ ಆರಂಭಿಸಬೇಕು. ಸರಕಾರಿ ಯೋಜನೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತಾರತಮ್ಯ ಎದ್ದು ಕಂಡಿದೆ. ಇದು ದಲಿತ ವಿರೋಧಿ ನೀತಿಯಾಗಿದೆ ಎಂದು ಆಪಾದಿಸಿದರು.
ದಲಿತರ ಅಭ್ಯುದಯ ಯೋಜನೆಗಳ ಫಲಾನುಭಗಳ ಪಟ್ಟಿ ಸಿದ್ಧತೆಯಲ್ಲಿ ಶಾಸಕರ ಅಧ್ಯಕ್ಷತೆಯ ಸಮಿತಿಯನ್ನು ರದ್ದುಪಡಿಸಬೇಕು. ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ ಕ್ರಮ ಜರುಗಿಸಬೇಕು. ದಲಿತ ಜನಾಂಗದ ಯೋಜನೆಗಳ ಫಲಾನುಭವಿಗಳಿಗೆ ಆದಾಯ ಮಿತಿಯನ್ನು 10 ಲಕ್ಷ ರೂ. ಹೆಚ್ಚಳ ಮಾಡಬೇಕು. ವಿವಿಧ ಇಲಾಖೆ, ವಿಶ್ವವಿದ್ಯಾನಿಲಯಗಳಲ್ಲಿ ಬಾಕಿಯಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬದಿರುವ ಇಲಾಖೆಗಳ ಅಧಿಕಾರಿಗಳು ಮತ್ತು ಉಪ ಕುಲಪತಿಗಳ ಮೇಲೆ ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು.
ಖಾಸಗಿ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕವನ್ನು ರಾಜ್ಯ ಸರಕಾರವೇ ಭರಿಸಬೇಕು. ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಎಲ್ಲ ನ್ಯಾಯಾಲಯಗಳಲ್ಲಿ ಅಳವಡಿಸಬೇಕು. ಕೋರ್ಟ್ ನೋಟರಿಗಳ ನೇಮಕಾತಿಯಲ್ಲಿ ಎಸ್ಸಿ-ಎಸ್ಟಿಗೆ ಮೀಸಲಾತಿ ಕಲ್ಪಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದರು.
.jpg)







