ಉಡುಪಿ: 9,90,773 ಮತದಾರರು, 1,111 ಮತಗಟ್ಟೆಗಳು
ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಪೂರ್ಣ

ಉಡುಪಿ, ಮಾ.7: ಕೆಲವೇ ದಿನಗಳಲ್ಲಿ ಘೋಷಣೆಯಾಗುವ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಗಳನ್ನು ನೀಡಿದ ಜಿಲ್ಲಾಧಿಕಾರಿಗಳು, ಕಳೆದ ಜ.16ರಂದು ಪ್ರಕಟಿಸಲಾಗಿರುವ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 9,90,773 ಮತದಾರರಿದ್ದು, ಈ ಬಾರಿ 1,111 ಮತಗಟ್ಟೆಗಳನ್ನು ತೆರೆಯಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಮಾನ್ಯತೆ ಪಡೆದ ಎಲ್ಲಾ ರಾಷ್ಟ್ರೀಯ ಪಕ್ಷಗಳಿಗೆ ಮತದಾರರ ಉಚಿತ ಪಟ್ಟಿಯನ್ನು ಒದಗಿಸಲಾಗಿದೆ. ಈ ವರ್ಷ ಚುನಾವಣೆ ನಡೆಯಲಿರುವುದರಿಂದ ಪರಿಷ್ಕರಣೆ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿ ನಾಮಪತ್ರ ಸ್ವೀಕರಿಸಲು ಪ್ರಾರಂಭ ಗೊಳ್ಳುವವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ ಎಂದರು.
ಈ ದಿನಾಂಕದವರೆಗೆ ಸ್ವೀಕೃತವಾದ ಎಲ್ಲಾ ಅರ್ಜಿಗಳನ್ನು (ಹಕ್ಕು ಮತ್ತು ಆಕ್ಷೇಪಣೆ) ಪರಿಶೀಲಿಸಿ ಅರ್ಹ ಮತದಾರರ ಪೂರಕ ಪಟ್ಟಿಯನ್ನು ತಯಾರಿಸಿ ಮೂಲ ಮತದಾರರ ಪಟ್ಟಿಗೆ ಜೋಡಿಸಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ ಎರಡು ಬಾರಿ ಮಿಂಚಿನ ನೋಂದಾವಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 4,77,243 ಪುರುಷ, 5,13,514 ಮಹಿಳೆಯರು ಹಾಗೂ 16 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 9,90,773 ಮತದಾರರಿದ್ದಾರೆ. ಈ ಬಾರಿ ಬೈಂದೂರಿನಲ್ಲಿ 246, ಕುಂದಾಪುರದಲ್ಲಿ 222, ಉಡುಪಿಯಲ್ಲಿ 226, ಕಾಪುನಲ್ಲಿ 208 ಹಾಗೂ ಕಾರ್ಕಳಲ್ಲಿ 209 ಮತಗಟ್ಟೆಗಳು ಇರಲಿವೆ.
ಜಿಲ್ಲೆಯ 50ಕ್ಕೂ ಅಧಿಕ ಮತಗಟ್ಟೆಗಳಿಗೆ ತಾನು ಖುದ್ದಾಗಿ ಹೋಗಿ ಪರಿಶೀಲಿಸಿದ್ದೇನೆ. ಇನ್ನುಳಿದ ಮತಗಟ್ಟೆಗಳಿಗೆ ಎಡಿಸಿ ಹಾಗೂ ಇತರ ಅಧಿಕಾರಿಗಳು ತೆರಳಿ ಅಲ್ಲಿರುವ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದ್ದಾರೆ. ಪ್ರತಿಯೊಂದು ಮತಗಟ್ಟೆಗಳಿಗೂ ಬೇಕಿರುವ ರ್ಯಾಂಪ್, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಪೀಠೋಪಕರಣ, ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಹಾಗೂ ಮತಗಟ್ಟೆಯ ಸಿಬ್ಬಂದಿಗಳಿಗೆ ಉಟೋಪಚಾರದ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಹೆಪ್ಸಿಬಾ ರಾಣಿ ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ 16,525 ಮಂದಿ ಯುವ ಮತದಾರರು (ಮೊದಲ ಬಾರಿ ಮತ ಚಲಾಯಿಸುವ ಹಕ್ಕು ಪಡೆದವರು) ಹೆಸರು ನೊಂದಾಯಿಸಿಕೊಂಡಿ ದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ 6584 ದೈಹಿಕ ದುರ್ಬಲ ಮತದಾರರನ್ನು ಗುರುತಿಸಿ ಅವರಿಗೂ ಮತದಾನ ಮಾಡಲು ಬೇಕಾದ ಎಲ್ಲಾ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ 1,111 ಮತಗಟ್ಟೆಗಳಲ್ಲಿ 255 ಮತಗಟ್ಟೆಗಳನ್ನು ಗಂಭೀರ ಮತಗಟ್ಟೆಗಳೆಂದೂ 37 ಮತಗಟ್ಟೆಗಳನ್ನು ದುರ್ಬಲ ವರ್ಗಗಳ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇವುಗಳಿಗೆ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಉಳಿದವೆಲ್ಲವೂ ಸಾಮಾನ್ಯ ಮತಗಟ್ಟೆಗಳಾಗಿವೆ.
1584 ವಿವಿ ಪ್ಯಾಟ್
ಜಿಲ್ಲೆಯಲ್ಲಿ ಚುನಾವಣೆಗೆ ಅಗತ್ಯವಿರುವ ಮತಯಂತ್ರಗಳನ್ನು ಈಗಾಗಲೇ ಸುಸಜ್ಜಿತಗೊಳಿಸಿ ಇರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1669 ಬ್ಯಾಲೆಟ್ ಯುನಿಟ್‌ಗಳು, 1348 ಕಂಟ್ರೋಲ್ ಯುನಿಟ್‌ಗಳು ಹಾಗೂ 1584 ವಿವಿಪ್ಯಾಟ್‌ಗಳು ಲಭ್ಯವಿದ್ದು, ಬಿಇಎಲ್‌ನ ಇಂಜಿನಿಯರ್‌ಗಳ ಮೂಲಕ ಪ್ರಥಮ ಹಂತದ ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಉಡುಪಿ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಯಾಗಿರುತ್ತಾರೆ. ಈಗಾಗಲೇ ಸಹಾಯಕ ಚುನಾವಣಾಧಿ ಕಾರಿಗಳನ್ನು ನೇಮಿಸಲಾಗಿದ್ದು, ಸಿಬ್ಬಂದಿಗಳಿಗೆ ಒಂದು ಹಂತದ ತರಬೇತಿಯನ್ನು ಈಗಾಗಲೇ ನೀಡಲಾಗಿದೆ ಎಂದರು.
ಚುನಾವಣಾ ನೀತಿ ಸಂಹಿತೆ
ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಕೂಡಲೇ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೊಳ್ಳಲಿದ್ದು, ಅದನ್ನು ಅನುಷ್ಟಾನಗೊಳಿಸಲು ವಿವಿಧ ಹಂತದಲ್ಲಿ ತಂಡಗಳನ್ನು ಈಗಾಗಲೇ ರಚಿಸಲಾಗಿದೆ. ಮತದಾನ ನಡೆಸಲು ಅಗತ್ಯವಿರುವ ಮತಗಟ್ಟೆ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳ ಪಟ್ಟಿಯನ್ನು ಈಗಾಗಲೇ ತಯಾರಿಸಲಾಗುತ್ತಿದೆ ಎಂದು ಹೆಪ್ಸಿಬಾ ರಾಣಿ ನುಡಿದರು.
ಸಹಾಯವಾಣಿ
ಜಿಲ್ಲಾ ಮತದಾರರ ಸಹಾಯವಾಣಿ (1950) ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಾರಂಭ ಮಾಡಿದ್ದು, ಸದ್ಯಕ್ಕೆ ಬೆಳಗ್ಗೆ 9ರಿಂದ ರಾತ್ರಿ9ರವರೆಗೆ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಇದರಿಂದ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ಮತದಾರರು ಪಡೆಯಬಹುದು.
ಈ ಬಾರಿಯ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಇ-ವಿಜಿಲ್ (eVigi) ಎಂಬ ಜನಸ್ನೇಹಿ ಆ್ಯಪ್‌ಗೆ ಜಾರಿಗೆ ತಂದಿದೆ. ಈ ಆ್ಯಪ್ ಮೂಲಕ ಜನರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ, ದೂರುಗಳನ್ನು ನೇರವಾಗಿ ಸಲ್ಲಿಸಲು ಅವಕಾಶವಿದೆ ಎಂದರು.
ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.







