ನಿಧಿ ಕೊರತೆ: ಸಿಬ್ಬಂದಿಗೆ ಅರ್ಧ ವೇತನ ಪಾವತಿಸಿದ ಟಾಟಾ ಸಂಶೋಧನಾ ಸಂಸ್ಥೆ

ಮುಂಬೈ,ಮಾ.7: ನಿಧಿಯ ಕೊರತೆಯಿಂದಾಗಿ ಸಿಬ್ಬಂದಿಗೆ ಫೆಬ್ರವರಿ ತಿಂಗಳ ಶೇ.50 ವೇತನವನ್ನಷ್ಟೇ ಪಾವತಿಸಲಾಗುವುದು ಎಂದು ಭಾರತದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿಐಎಫ್‌ಆರ್) ಅಧಿಕಾರಿಗಳು ತಿಳಿಸಿದ್ದಾರೆ.
ಸಂಸ್ಥೆಯ ಸಿಬ್ಬಂದಿಗೆ ಟಿಐಎಫ್‌ಆರ್ ರಿಜಿಸ್ಟ್ರಾರ್ ನಿವೃತ್ತ ವಿಂಗ್ ಕಮಾಂಡರ್ ಜಾರ್ಜ್ ಆ್ಯಂಟೊನಿ ಬರೆದ ಪತ್ರದಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ನಿಧಿಯ ಕೊರತೆಯಿಂದಾಗಿ ಸಂಸ್ಥೆ ಕೇಂದ್ರ ಮತ್ತು ಫೀಲ್ಡ್ ಸ್ಟೇಶನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಫೆಬ್ರವರಿ ತಿಂಗಳ ವೇತನದ ಶೇ.50ನ್ನಷ್ಟೇ ಪಾವತಿಸಲಾಗುವುದು. ಉಳಿದ ಭಾಗವನ್ನು ಸಾಕಷ್ಟು ನಿಧಿ ದೊರೆತ ನಂತರ ನೀಡಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಿಬ್ಬಂದಿ ವರ್ಗ ಹಾಗೂ ಇತರ ಅಧಿಕಾರಿಗಳಿಗೆ ಅರ್ಧ ವೇತನ ದೊರೆತರೂ ಪ್ರತಿ ತಿಂಗಳು ಆಗುವ ಕಡಿತಗಳು ಮಾತ್ರ ಪೂರ್ಣ ವೇತನದ ಆಧಾರದಲ್ಲೇ ಆಗಲಿದೆ ಎಂದು ಪತ್ರದಲ್ಲಿ ನಿವೃತ್ತ ವಿಂಗ್ ಕಮಾಂಡರ್ ತಿಳಿಸಿದ್ದಾರೆ. ವೇತನ ಕಡಿತ ನಿರ್ಧಾರದಿಂದ ಸುಮಾರು 3,000 ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಹಿರಿಯ ಅಧಿಕಾರಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.
ಟಿಐಎಫ್‌ಆರ್ ಭಾರತ ಸರಕಾರದ ಪರಮಾಣು ಇಂಧನ ವಿಭಾಗದ ರಾಷ್ಟ್ರೀಯ ಕೇಂದ್ರವಾಗಿದೆ. 2002ರಲ್ಲಿ ಇದಕ್ಕೆ ಪರಿಗಣಿತ ವಿಶ್ವವಿದ್ಯಾನಿಲಯ ಮಾನ್ಯತೆ ದೊರೆತಿದೆ. ಸಂಸ್ಥೆಯು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ, ಕಂಪ್ಯೂಟರ್ ಸೈನ್ಸ್ ಮತ್ತು ವಿಜ್ಞಾನ ಶಿಕ್ಷಣದಲ್ಲಿ ಮೂಲ ಸಂಶೋಧನೆ ನಡೆಸುತ್ತದೆ.







